ಮಂಗಳೂರು: ಸ್ವಚ್ಛ ಮಂಗಳೂರು ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದ ಧೈಯದೊಂದಿಗೆ, ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆ ಚೀಲ ವಿತರಿಸುವ ವಿಶೇಷ ಅಭಿಯಾನದ ಮೂಲಕ ನಗರದ ಸಂತ ಅಲೋಶಿಯಸ್ ಐಟಿಐ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಹಸಿರು ದಳ, ಸೂಜಿ ಮಲ್ಲಿಗೆ ಸ್ವಸಹಾಯ ಗುಂಪು, ಲಯನ್ಸ್ ಕ್ಲಬ್ ಮಂಗಳೂರು, ಲಿಯೋ ಕ್ಲಬ್ ಸೈಂಟ್ ಅಲೋಶಿಯಸ್ ಐಟಿಐ ಹಾಗೂ ಲಿಯೋ ಕ್ಲಬ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಸ್ವಚ್ಛ ಮಂಗಳೂರಿಗಾಗಿ ನಮ್ಮ ಕೌಶಲ್ಯ’ ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಐಟಿಐ ವಿದ್ಯಾರ್ಥಿಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಹಳೆಯ ಬಟ್ಟೆಗಳನ್ನು ಬಳಸಿ ಹೊಲಿದ ಸುಮಾರು 1000 ಬಟ್ಟೆ ಚೀಲಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಕಾಲ್ನಡಿಗೆ ಜಾಥಾ:
‘ಪ್ಲಾಸ್ಟಿಕ್ ಮುಕ್ತ ಪರಿಸರ-ನಮ್ಮ ಜವಾಬ್ದಾರಿ’ ಎಂಬ ಸಂದೇಶದೊಂದಿಗೆ ಸಂತ ಅಲೋಶಿಯಸ್ ಐಟಿಐನಿಂದ ಬಂಟ್ಸ್ ಹಾಸ್ಟೆಲ್ ಮತ್ತು ಮಲ್ಲಿಕಟ್ಟೆವರೆಗೆ ಜಾಗೃತಿ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಜಾಥಾದ ಉದ್ದಕ್ಕೂ ಸಾರ್ವಜನಿಕರ ಬಳಿಯಿದ್ದ ಪ್ಲಾಸ್ಟಿಕ್ ಚೀಲಗಳನ್ನು ಪಡೆದುಕೊಂಡು, ಅದಕ್ಕೆ ಪರ್ಯಾಯವಾಗಿ ಬಟ್ಟೆ ಚೀಲಗಳನ್ನು ಉಚಿತವಾಗಿ ನೀಡುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಯಿತು.

ಸಂತ ಅಲೋಶಿಯಸ್ ಐಟಿಐ ಪ್ರಾಂಶುಪಾಲರಾದ ರೋಶನ್ ಡಿಸೋಜ ಅವರು ವಿದ್ಯಾರ್ಥಿಗಳ ಶ್ರಮ ಹಾಗೂ ಸಾರ್ವಜನಿಕರ ಸಹಕಾರವನ್ನು ಸ್ಮರಿಸಿ, ಅಭಿಯಾನದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಶುಭ ಹಾರೈಸಿದರು. ಸಂತ ಅಲೋಶಿಯಸ್ ಐಟಿಐ ಮಂಗಳೂರು ನಿರ್ದೇಶಕ ವಂ. ಜಾನ್ ಡಿಸೋಜ ಎಸ್.ಜೆ. ಅಧ್ಯಕ್ಷತೆ ವಹಿಸಿದ್ದರು.

ಹಸಿರು ದಳದ ಸಂಚಾಲಕ ನಾಗರಾಜ್ ಬಜಾಲ್, ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಹೇಮಾ ರಾವ್, ಉಪ ಪ್ರಾಂಶುಪಾಲ ಆಲ್ವಿನ್ ಮಿನೇಜಸ್, ನೋಯೆಲ್ ಲೋಬೊ, ವಿಲ್ಸನ್ ಎನ್., ತರಬೇತಿ ಅಧಿಕಾರಿ ಸೈಂಟ್ ಅಲೋಶಿಯಸ್ ಐಟಿಐ ಲಿಯೋ ಕ್ಲಬ್ ಅಧ್ಯಕ್ಷ ನಾಗರಾಜ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.



