LATEST NEWS

ಪೆರುವಾಯಿ ಗ್ರಾಮ ಪಂಚಾಯತ್‌ನಲ್ಲಿ ‘ವಿಬಿ-ಜಿ ರಾಮ್ ಜಿ’ ವಿಶೇಷ ಗ್ರಾಮ ಸಭೆ

ವಿಟ್ಲ: ಪೆರುವಾಯಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಬಿಜಿ–ರಾಮ್ ಜಿ (VBG–RAM G) – ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ, 2027–28ನೇ ಸಾಲಿನ ಕಾರ್ಮಿಕ ಆಯವ್ಯಯ ಮತ್ತು ಕ್ರಿಯಾ ಯೋಜನೆ ತಯಾರಿಸುವ ಅಂಗವಾಗಿ ವಿಶೇಷ ಗ್ರಾಮಸಭೆಯನ್ನು ನಡೆಸಲಾಯಿತು.

ಯೋಜನೆ ಬಗ್ಗೆ ಸಮಗ್ರ ಮಾಹಿತಿ:

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ಶ್ರೀಮತಿ ಸುರೇಖಾ ಅವರು ಮಾತನಾಡಿ, ವಿಬಿಜಿ–ರಾಮ್ ಜಿ ಯೋಜನೆಯ ಮುಖ್ಯ ಉದ್ದೇಶಗಳು, ಯೋಜನೆಯಡಿ ಕೈಗೊಳ್ಳಬಹುದಾದ ವಿವಿಧ ಕಾಮಗಾರಿಗಳು, ಕೂಲಿ ಕಾರ್ಮಿಕರಿಗೆ ದೊರೆಯುವ ಉದ್ಯೋಗಾವಕಾಶಗಳು ಹಾಗೂ ಗ್ರಾಮೀಣ ಪ್ರದೇಶದ ಜನರ ಜೀವನೋಪಾಯ ಸುಧಾರಣೆಗೆ ಈ ಯೋಜನೆ ಹೇಗೆ ಮಹತ್ವದ್ದಾಗಿದೆ ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ರಸ್ತೆ, ಚರಂಡಿ, ನೀರು ಸಂರಕ್ಷಣೆ, ಕೃಷಿ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳ ಅರ್ಜಿಗಳನ್ನು ಸ್ವೀಕರಿಸಲಾಯಿತು. ಗ್ರಾಮಸ್ಥರು ತಮ್ಮ ಗ್ರಾಮದ ಅಗತ್ಯ ಕಾಮಗಾರಿಗಳ ಕುರಿತು ಪ್ರಮುಖ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು. ಸಭೆಯಲ್ಲಿ 2027–28ನೇ ಸಾಲಿನ ಕಾರ್ಮಿಕ ಆಯವ್ಯಯ ಹಾಗೂ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಬೇಡಿಕೆಗಳನ್ನು ಪರಿಗಣಿಸಿ, ಅಗತ್ಯ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಗೊಳಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಅಭಯ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಚಿತ್ರಾಕ್ಷಿ ಅವರು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಶ್ರೀಮತಿ ರಕ್ಷಿತಾ ಅವರು ವಂದನಾರ್ಪಣೆ ಮಾಡಿದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಮಾಪ್ತಿಗೊಳಿಸಲಾಯಿತು.

Share News