ಬೆಳ್ತಂಗಡಿ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ, ನಾಯಕತ್ವದ ಗುಣ ಹಾಗೂ ಸೃಜನ ಶೀಲತೆ ಯನ್ನು ಬೆಳೆಸುವ ಉದ್ದೇಶದಿಂದ ‘ವಿಝ್ ವರ್ಲ್ಡ್’ ಎಂಬ ವಿನೂತನ ನೇರ ದೂರದರ್ಶನ ಕಾರ್ಯಕ್ರಮ ವನ್ನು ಪ್ರತಿ ವರ್ಷ ನಡೆಸುತ್ತಾ ಬರಲಾಗಿದೆ. ಮಕ್ಕಳ ಭಾಗವಹಿಸುವಿಕೆ ಮತ್ತು ಅವರಲ್ಲಿರುವ ಆತ್ಮವಿಶ್ವಾಸ ಸಂತಸ ತಂದಿದೆ ಎಂದು ವಿದ್ವತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ತಿಳಿಸಿದರು.

ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ‘ಇನ್‌ಸ್ಪೈರ್ ವಿದ್ವತ್’ ಎಂಬ ವಿಚಾರದಡಿ ಗುರುವಾಯನಕೆರೆ ಶಕ್ತಿನಗರದ ವಿದ್ವತ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡ ‘ವಿಝ್ ವರ್ಲ್ಡ್-2026’ ನೇರ ದೂರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ದರು. ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಕಲಿಕೆಗೆ ಸೀಮಿತವಾಗದೆ ಸಾರ್ವಜನಿಕವಾಗಿ ಹೇಗೆ ಪ್ರತಿಕ್ರಿಯಿಸಬೇಕು, ವಿಚಾರಗಳನ್ನು ಹೇಗೆ ಪ್ರಸ್ತುತಪಡಿಸಬೇಕು ಮತ್ತು ತಂಡವಾಗಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಇದು ಕಲಿಸುತ್ತದೆ ಎಂದರು.

ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ. ಮಂಡಗಳಲೆ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತನ್ನು ಪರಿಚಯಿಸಲು, ವರದಿಗಾರಿಕೆ ಹಾಗೂ ಸುದ್ದಿ ಪ್ರಸಾರದ ಕೌಶಲ್ಯ ಬೆಳೆಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು. ತೀರ್ಪುಗಾರರಾಗಿ ಆಗಮಿಸಿದ್ದ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ಜಗನ್ನಾಥ ಮಾತನಾಡಿ, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಟಿವಿ ನಿರೂಪಕರು, ವರದಿಗಾರರು ಹಾಗೂ ಚರ್ಚಾ ಕಾರ್ಯಕ್ರಮದ ಪ್ಯಾನೆಲಿಸ್ಟ್‌ಗಳಂತೆ ಅನುಭವಿ ತಜ್ಞರಂತೆ ಕಂಡುಬಂದಿದ್ದಾರೆ ಎಂದು ಪ್ರಶಂಸಿಸಿದರು.

ಮತ್ತೋರ್ವ ತೀರ್ಪುಗಾರ, ವೃತ್ತಿ ಮತ್ತು ಜೀವನ ಮಾರ್ಗದರ್ಶನ ತಜ್ಞ ವಿಕ್ರಮ್ ನಾಯಕ್ ಹಾಗೂ ಕಾಲೇಜಿನ ಪಿ.ಆರ್.ಒ. ಚೈತ್ರೇಶ್ ಸಿ. ಇಳಂತಿಲ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು. ವೇದಿಕೆಯಲ್ಲಿ ವಿದ್ವತ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್ ರೈ, ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ಪ್ರಾಂಶುಪಾಲ ಬಾಲಕೃಷ್ಣ ನಾಯಕ್, ಖಜಾಂಚಿ ಕಾಶೀನಾಥ ಎಂ.ಕೆ., ಟ್ರಸ್ಟಿಗಳಾದ ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ಸಾತ್ವಿಕ್ ಶೆಟ್ಟಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಆಂಗ್ಲ ವಿಭಾಗದ ಉಪನ್ಯಾಸಕ ವಿನಯ ಕುಮಾರ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ವಿದ್ವತ್ ಪ್ರೈಮ್, ವಾಯ್ಸ್ ಆಫ್ ಇಂಡಿಯಾ, ವಿದ್ವತ್ ಸಾರಥಿ ಹಾಗೂ ವಾಯ್ಸ್ ಆಫ್ ವಿದ್ವತ್ ಎಂಬ ನಾಲ್ಕು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ‘ವಾಯ್ಸ್ ಆಫ್ ಇಂಡಿಯಾ’ ತಂಡ ಪ್ರಥಮ ಸ್ಥಾನ ಗಳಿಸಿದರೆ, ‘ವಾಯ್ಸ್ ಆಫ್ ವಿದ್ವತ್’ ತಂಡ ದ್ವಿತೀಯ ಸ್ಥಾನ ಗಳಿಸಿತು. ವೈಯಕ್ತಿಕ ವಿಭಾಗದಲ್ಲಿ ಶ್ರವಣ್ ರೈ, ಸಿ.ಎ.ಫಾತಿಮಾ (ಉತ್ತಮ ನಿರೂಪಕರು), ಮೈಲಾರ್ ಚಿಲ್ಲಾಲ್ (ಬೆಸ್ಟ್ ಮಾಡರೇಟರ್), ಫಾತಿಮಾ ಇಫಾ (ಬೆಸ್ಟ್ ರಿಪೋರ್ಟರ್) ಹಾಗೂ ಉತ್ತಮ ತಂತ್ರಜ್ಞಾನ ವಿಭಾಗದಲ್ಲಿ ವಾಯ್ಸ್ ಆಫ್ ಇಂಡಿಯಾ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
