ಮಂಗಳೂರು, : ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ (KCDA) 68ನೇ ವಾರ್ಷಿಕ ಮಹಾಸಭೆಯು ನಗರದ ದೇರೆಬೈಲ್ ಚರ್ಚ್ ಹಾಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಬಾರಿಯ ಮಹಾಸಭೆಯ ಆತಿಥ್ಯವನ್ನು ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘವು (SKDCDA) ವಹಿಸಿಕೊಂಡಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಪ್ರತಿನಿಧಿಗಳು, ಜಿಲ್ಲಾ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಬೃಹತ್ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.
ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ಅದ್ಧೂರಿ ಚಾಲನೆ
ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ ಅವರು ಸಂಘದ ಕ್ರಿಯಾಶೀಲ ಚಟುವಟಿಕೆಗಳು ಹಾಗೂ ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನೂ ಸ್ವಾಗತಿಸಿದರು. ಶ್ರೀ ಶಶಿಧರ ಪಳಂಗಾಯ ಅವರು ಕರಾವಳಿಯ ಸಾಂಪ್ರದಾಯಿಕ ವೈಶಿಷ್ಟ್ಯ, ಶ್ರೀಮಂತ ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಹಾಗೂ ವೈದ್ಯಕೀಯ ಸೇವಾ ಇತಿಹಾಸವನ್ನು ಸಭೆಯ ಮುಂದಿಟ್ಟರು.
ಬಳಿಕ KCDA ರಾಜ್ಯ ಅಧ್ಯಕ್ಷರಾದ ಶ್ರೀ ರಘುನಾಥ್ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ.ಕೆ. ಜೀವನ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು. ಕರಾವಳಿಯ ಫಲವಂತಿಕೆಯ ಸಂಕೇತವಾದ ಭತ್ತ ತುಂಬಿದ ಕಳಸದಲ್ಲಿ ತೆಂಗಿನ ಕೋಡನ್ನು ತೆರೆಯುವ ಮೂಲಕ ವೇದಿಕೆಯಲ್ಲಿ ಸಾಂಪ್ರದಾಯಿಕವಾಗಿ ಉದ್ಘಾಟನೆ ನೆರವೇರಿಸಿ, ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು.
ಮೂವರು ಹಿರಿಯ ಫಾರ್ಮಸಿಸ್ಟ್‌ಗಳಿಗೆ “ಕೆಮಿಸ್ಟ್ ರತ್ನ ಪ್ರಶಸ್ತಿ-2026” ಗೌರವ
ಔಷಧಿ ವ್ಯಾಪಾರಿಗಳಾಗಿ ಸಮಾಜದ ಅಭ್ಯುದಯಕ್ಕಾಗಿ ಮತ್ತು ಜನಸಾಮಾನ್ಯರ ಆರೋಗ್ಯ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡ ರಾಜ್ಯದ ಮೂವರು ಹಿರಿಯ ಮತ್ತು ಅನುಭವಿ ಫಾರ್ಮಸಿಸ್ಟ್‌ಗಳಿಗೆ ಈ ಸಂದರ್ಭದಲ್ಲಿ ಪ್ರತಿಷ್ಠಿತ “ಕೆಮಿಸ್ಟ್ ರತ್ನ ಪ್ರಶಸ್ತಿ-2026” ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಪುರಸ್ಕೃತರ ವಿವರ
ಶ್ರೀ ಸದಾನಂದ ಶೆಟ್ಟಿ – ಗಣೇಶ್ ಮೆಡಿಕಲ್ಸ್, ಮಂಗಳೂರು
ಶ್ರೀ ಅಶೋಕ್ ವಿ. ಬಿಜ್ಜಲ್ – ಅಶೋಕ್ ಮೆಡಿಕಲ್ ಸ್ಟೋರ್ಸ್, ಬಾಗಲಕೋಟೆ
ಶ್ರೀ ಕೆ. ಪ್ರಭಾಕರನ್ – ಭಾರ್ಗವಿ ಫಾರ್ಮ್, ಮಂಡ್ಯ
ಔಷಧಿ ವ್ಯಾಪಾರಿಗಳ ಜ್ವಲಂತ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ
ಮಹಾಸಭೆಯ ಸರ್ವಾಧ್ಯಕ್ಷತೆ ವಹಿಸಿದ್ದ KCDA ರಾಜ್ಯ ಅಧ್ಯಕ್ಷ ಶ್ರೀ ರಘುನಾಥ್ ರೆಡ್ಡಿಯವರು ಪ್ರಸ್ತುತ ಔಷಧಿ ವ್ಯಾಪಾರಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಅವುಗಳಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಬೆಳಕು ಚೆಲ್ಲಿದರು. ಇದೇ ವೇಳೆ ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆಯಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಎ.ಕೆ. ಜೀವನ್ ಅವರು ಮಾತನಾಡಿ, ಔಷಧ ವ್ಯಾಪಾರ ರಂಗದಲ್ಲಿ ಎದುರಾಗುತ್ತಿರುವ ಸವಾಲುಗಳ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ವಿಶೇಷ ಮನವಿಯನ್ನು ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ಯು.ಟಿ ಖಾದರ್ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ KCDA ಉಪಾಧ್ಯಕ್ಷರಾದ ಶ್ರೀ ಬಿ.ಕೆ. ಪ್ರಸನ್ನ ಕುಮಾರ್, ಶ್ರೀ ಶಿವರಾಜ್ ಪಾಟೀಲ್, ಖಜಾಂಚಿ ಬಿ. ಉಮೇಶ್, ಸಹ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಕೆಳಗಾರ್, ಮತ್ತು ಸಂಘಟನಾ ಕಾರ್ಯದರ್ಶಿ ವಿಜಯ ಕುಮಾರ್ ಎಸ್. ಬುರುಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ ಹಾಗೂ ಕಾರ್ಯದರ್ಶಿ ಶ್ರೀ ಡಾ. ಎ.ಕೆ. ಜಮಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಶ್ರೀ ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧೆಡೆಯಿಂದ ಬಂದ ಪ್ರತಿನಿಧಿಗಳಿಗೆ ನೆನಪಿನ ಸ್ಮರಣಿಕೆ ನೀಡುವುದರೊಂದಿಗೆ 68ನೇ ವಾರ್ಷಿಕ ಮಹಾಸಭೆಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
