ಮಂಗಳೂರು, ನವೆಂಬರ್ 02 : ಕಳೆದ 26 ವರ್ಷಗಳಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ ಇಲಾಖೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ಅರುಣಕಾಂತ್ ಅವರು ಸರಕಾರಿ ಸೇವೆಯಿಂದ ಅಕ್ಟೋಬರ್ 31 ರಂದು ನಿವೃತ್ತರಾಗಿದ್ದಾರೆ.
ಇಲಾಖೆಯಲ್ಲಿ ಚಾಲಕರಾಗಿ 1999ರಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡ ಇವರು, ಬೆಂಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.
ಭಾವಪೂರ್ಣ ಬೀಳ್ಕೊಡುಗೆ ಮತ್ತು ಸನ್ಮಾನ:
ಅರುಣಕಾಂತ್ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಶನಿವಾರ ವಾರ್ತಾ ಇಲಾಖೆಯ ಮಂಗಳೂರು ಕಚೇರಿಯಲ್ಲಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿ ಆಗಿ ಪಾಲ್ಗೊಂಡು ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಅವರು, “ವಾರ್ತಾ ಇಲಾಖೆಯಲ್ಲಿ ಚಾಲಕರಾಗಿ ಅರುಣಕಾಂತ್ ಅವರು ಸಲ್ಲಿಸಿದ ಸೇವೆ ಶ್ಲಾಘನೀಯವಾದುದು. ಪತ್ರಕರ್ತರೊಂದಿಗೆ ನೆರೆಹೊರೆಯವರಂತೆ ಉತ್ತಮ ಸಂಬಂಧವನ್ನು ಹೊಂದಿದ್ದ ಅವರು, ಸರಕಾರಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾಧ್ಯಮದವರ ಕಾರ್ಯನಿರ್ವಹಣೆಗೆ ಹಗಲಿರುಳು ಶ್ರಮಿಸಿದ್ದಾರೆ,” ಎಂದು ಗುಣಗಾನ ಮಾಡಿದರು.
ಈ ಗೌರವ ವಂದನೆ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಹಾಗೂ ವಾರ್ತಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು, ನಿವೃತ್ತ ಉದ್ಯೋಗಿಗೆ ಶುಭ ಹಾರೈಸಿದರು.
