ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಐತಿಹಾಸಿಕ ಮೊದಲ ವಿಶ್ವ ಕೊಂಕಣಿ ಸಂಗೀತ ಗಾಯನ ಕಾರ್ಯಕ್ರಮದ ಭವ್ಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಸೋಮವಾರ ಮಂಗಳೂರಿಗೆ ಆಗಮಿಸಿದರು.

ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (MIA) ಬಂದಿಳಿದ ಗೋವಾ ಮುಖ್ಯಮಂತ್ರಿಯವರನ್ನು ಕಾರ್ಯಕ್ರಮ ಆಯೋಜನಾ ಸಮಿತಿ ಹಾಗೂ ಕೊಂಕಣಿ ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ವಿಮಾನ ನಿಲ್ದಾಣದಲ್ಲಿ ಅವರಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯ ಸ್ವಾಗತವನ್ನು ಕೋರಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನಾ ಸಮಿತಿಯ ಪ್ರಮುಖರಾದ ರೋಯ್ ಕ್ಯಾಸ್ತಲಿನೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಆಲ್ವಾರಿಸ್ ಸೇರಿದಂತೆ ಕೊಂಕಣಿ ಸಮುದಾಯದ ಪ್ರಮುಖ ನಾಯಕರು ಮತ್ತು ಗಣ್ಯರು ಉಪಸ್ಥಿತರಿದ್ದು, ಮುಖ್ಯಮಂತ್ರಿಗಳಿಗೆ ಗೌರವ ಸಲ್ಲಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವ ಡಾ. ಪ್ರಮೋದ್ ಸಾವಂತ್ ಅವರು ಕಾರ್ಯಕ್ರಮದ ಕುರಿತು ಮಹತ್ವದ ಸಂದೇಶ ನೀಡಲಿದ್ದಾರೆ.

