LATEST NEWS

ಕರಾವಳಿಯ ಹಾಸ್ಯ ನಟರ ದಂಡಿನ ‘ವಾದಿರಾಜ ವಾಲಗ ಮಂಡಳಿ’ ಪೋಸ್ಟರ್ ಅನಾವರಣ: ಡಿಸೆಂಬರ್ ಅಂತ್ಯಕ್ಕೆ ಸಿನಿಮಾ ಬಿಡುಗಡೆ!

ಮಂಗಳೂರು: ಕರಾವಳಿಯ ಖ್ಯಾತ ಹಾಸ್ಯ ನಟರ ದಂಡೇ ಸವಾರಿ ಮಾಡಿರುವ, ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ವಾದಿರಾಜ ವಾಲಗ ಮಂಡಳಿ’ (ವಿವಿಎಂ) ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ಅದ್ಧೂರಿಯಾಗಿ ಅನಾವರಣಗೊಳಿಸಲಾಗಿದೆ. ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿದ್ದು, ಮುಂಬರುವ ಡಿಸೆಂಬರ್ ತಿಂಗಳ ಕೊನೆಯಲ್ಲಿ ವಿಶ್ವಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಈಗಾಗಲೇ ‘ಗಲಾಟೆ’ ಸಿನಿಮಾ ಮತ್ತು ‘ಜೋಗುಳ’ ಎಂಬ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಎಂ.ಎನ್.ಆರ್. ಪ್ರೊಡಕ್ಷನ್, ಮತ್ತೊಮ್ಮೆ ಉತ್ತಮ ಅಭಿರುಚಿಯ ಕಥಾಹಂದರವನ್ನು ಬೆಳ್ಳಿತೆರೆಗೆ ತರುತ್ತಿದೆ.

55 ದಿನಗಳ ಚಿತ್ರೀಕರಣ, ಕರಾವಳಿಯ ಸೊಗಡು:
ಬ್ರಹ್ಮಾವರ, ಮಂಗಳೂರು, ಮುಲ್ಕಿ ಮತ್ತು ಕಾಸರಗೋಡು ಮುಂತಾದ ಸುಂದರ ಪರಿಸರದಲ್ಲಿ ಸುಮಾರು 55 ದಿನಗಳ ಕಾಲ ಎರಡು ಹಂತಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸಂಪೂರ್ಣ ಹಾಸ್ಯ ಮತ್ತು ಕುತೂಹಲದಿಂದ ಕೂಡಿರುವ ಈ ಸಿನಿಮಾ, ಕರಾವಳಿ ಕನ್ನಡದ ವಿಶಿಷ್ಟ ಸಂಭಾಷಣಾ ಶೈಲಿ ಹಾಗೂ ಸೊಗಡನ್ನು ಒಳಗೊಂಡಿದೆ. ಇಡೀ ಕುಟುಂಬ ಸಮೇತ ಒಟ್ಟಾಗಿ ಕುಳಿತು ನೋಡಬಹುದಾದ ಪಕ್ಕಾ ಮನೋರಂಜನಾತ್ಮಕ ಚಿತ್ರ ಇದಾಗಿದೆ.

ಭರ್ಜರಿ ತಾರಾಗಣ ಹಾಗೂ ತಾಂತ್ರಿಕ ತಂಡ:

ಚಿತ್ರದಲ್ಲಿ ‘ಗುಂಡುಮಾಮ’ ಖ್ಯಾತಿಯ ನವೀನ್ ಡಿ ಪಡೀಲ್, ‘ಸು ಫ್ರಮ್ ಸೊ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪ ರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು, ಲಕ್ಷ್ಮಣ ಮಲ್ಲೂರು ಸೇರಿದಂತೆ ಕರಾವಳಿಯ ಘಟಾನುಘಟಿ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕರಾಗಿ ಕಾಣಿಸಿಕೊಂಡರೆ, ತನ್ವಿ ರಾವ್ ಹಾಗೂ ವೇನ್ಯ ರೈ ನಾಯಕಿಯರಾಗಿ ಮಿಂಚಿದ್ದಾರೆ.

ವರಾಹ ರೂಪಂ’ ಹಾಡಿನ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಟ, ನಿರ್ದೇಶಕ ಹಾಗೂ ಸಾಹಿತಿ ಶಶಿರಾಜ್ ಕಾವೂರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅನುಭವಿ ಛಾಯಾಗ್ರಾಹಕ ಚೆನ್ನೈಯ ಎಸ್.ಚಂದ್ರಶೇಖರನ್ ಅವರ ಕ್ಯಾಮೆರಾ ಕೈಚಳಕ, ಸ್ಟಂಟ್ ಶಿವು ಅವರ ಸಾಹಸ ಮತ್ತು ವಿನಾಯಕ ಆಚಾರ್ಯ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಪ್ರಸಿದ್ಧ ಕಲಾ ನಿರ್ದೇಶಕ ದೇವಿ ಅವರು ಚಿತ್ರದ ಪೋಸ್ಟರ್ ವಿನ್ಯಾಸಗೊಳಿಸಿದ್ದಾರೆ.

ಮ್ಯೂಸಿಕಲ್ ಹಿಟ್ ‘ವಿವಿಎಂ’: 9 ಹಾಡುಗಳ ಧಮಾಕಾ!

ಚಿತ್ರಕ್ಕೆ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಸಿನಿಮಾದಲ್ಲಿ ಒಟ್ಟು 9 ಹಾಡುಗಳಿವೆ (5 ಪೂರ್ಣ ಪ್ರಮಾಣದ ಹಾಡುಗಳು ಮತ್ತು 4 ಬಿಟ್ ಸಾಂಗ್ಸ್). ಕೆನಡಾ ಮೂಲದ ಅಭಿ ಕ್ಯೂ (ಬ್ರಹ್ಮಕಲಶ ಹಾಡಿನ ಖ್ಯಾತಿ), ಚೆನ್ನೈ ಮೂಲದ ಸಾಯಿವಿಘ್ನೇಶ್ (ವರಾಹರೂಪಂ ಖ್ಯಾತಿ), ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು ಮತ್ತು ಮಣಿಕಾಂತ್ ಕದ್ರಿ ಹಾಡುಗಳಿಗೆ ದನಿಯಾಗಿದ್ದಾರೆ.

ಪರಭಾಷೆಗಳಿಗೂ ಡಬ್ಬಿಂಗ್:

ಚಿತ್ರದ ನವಿರಾದ ಹಾಸ್ಯ ಮತ್ತು ಮೇಕಿಂಗ್ ಗುಣಮಟ್ಟವನ್ನು ಕಂಡು, ನೆರೆರಾಜ್ಯದ ಕೇರಳಿಗರು ಹಾಗೂ ತಮಿಳು ಪ್ರೇಕ್ಷಕರೂ ಇದನ್ನು ಇಷ್ಟಪಡುತ್ತಾರೆ ಎಂಬ ಬಲದಾದ ವಿಶ್ವಾಸ ಚಿತ್ರತಂಡಕ್ಕಿದೆ. ಹೀಗಾಗಿ ಸದ್ಯ ಚಿತ್ರದ ಮಲೆಯಾಳಂ ಹಾಗೂ ತಮಿಳು ಭಾಷೆಗಳ ಡಬ್ಬಿಂಗ್ ಕಾರ್ಯಗಳು ಕೂಡ ಭರದಿಂದ ಸಾಗುತ್ತಿವೆ. ಬೇರೆ ಸಿನಿಮಾಗಳಿಗೆ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧೆಯಾಗದಂತೆ ನೋಡಿಕೊಂಡು, ಡಿಸೆಂಬರ್ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಕಾರ್ಯಕಾರಿ ನಿರ್ಮಾಪಕರಾದ ಲಕ್ಷ್ಮಣ ಮಲ್ಲೂರು, ಸಂತೋಷ್ ಶೆಟ್ಟಿ, ಪ್ರೊಡಕ್ಷನ್ ಮ್ಯಾನೇಜರ್ ರಾಜೇಶ್ ಕುಡ್ಲ, ನಿರ್ದೇಶಕ ಶಶಿರಾಜ್ ಕಾವೂರು, ನಟ ನವೀನ್ ಡಿ. ಪಡೀಲ್ ಹಾಗೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ‘ವಿವಿಎಂ’ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.

Share News