ಮಂಗಳೂರು, ನ. 8: ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲೇ ಅತಿದೊಡ್ಡ ಮಕ್ಕಳ ಸಮಾವೇಶವಾದ ‘ನಿನಾದ್ – ಭುರ್ಗ್ಯಾಂಲೆಂ ಫೆಸ್ತ್ 2K26’ (ಮಕ್ಕಳ ಹಬ್ಬ) ಭಾನುವಾರ ವಾಮಂಜೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (SJEC) ಮೈದಾನದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ‘ಮಕ್ಕಳ ವರ್ಷ 2026’ರ ಆಚರಣೆಯ ಅಂಗವಾಗಿ ನಡೆದ ಈ ಬೃಹತ್ ಸಮಾವೇಶದಲ್ಲಿ ಧರ್ಮಕ್ಷೇತ್ರದ 125 ಚರ್ಚ್ಗಳಿಂದ 6,500 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು.
ಬೃಹತ್ ಪರಮಪ್ರಸಾದ ಮತ್ತು ಶಿಲುಬೆಯ ಆಕೃತಿ ರಚನೆ: ಈ ಬೃಹತ್ ಸಮಾವೇಶದ ಪ್ರಮುಖಆಕರ್ಷಣೆಯಾಗಿ, 6,500 ಮಕ್ಕಳು ಒಗ್ಗೂಡಿ ವಿಶಾಲ ಮೈದಾನದಲ್ಲಿ ಪವಿತ್ರ ಪರಮಪ್ರಸಾದ, ಪಾನಪಾತ್ರೆ ಮತ್ತು ಶಿಲುಬೆಯ ಬೃಹತ್ ಜೀವಂತ ಆಕೃತಿಯನ್ನು ರಚಿಸಿದರು. “ಮಕ್ಕಳು ಪವಿತ್ರ ಪರಮಪ್ರಸಾದದಿಂದ ಪೋಷಿಸಲ್ಪಡುತ್ತಾರೆ ಮತ್ತು ಶಿಲುಬೆಯ ತ್ಯಾಗದಿಂದ ಪ್ರೇರಿತರಾಗಿದ್ದಾರೆ ಹಾಗೂ ಕ್ರಿಸ್ತನಲ್ಲಿ ಭದ್ರವಾಗಿ ಬೇರೂರಿದ್ದಾರೆ ಎಂಬ ಸಂದೇಶವನ್ನು ಸಾರುವ ಈ ರೋಮಾಂಚಕ ದೃಶ್ಯವನ್ನು ಡೋನ್ ಮೂಲಕ ಸೆರೆಹಿಡಿಯಲಾಯಿತು.
ಮಕ್ಕಳೇ ಧರ್ಮಕ್ಷೇತ್ರದ ಅತಿದೊಡ್ಡ ಸಂಪತ್ತು – ಬಿಷಪ್ ಡಾ. ಪೀಟರ್ ಪಾಲ್ಸ್ ಸಲ್ವಾನ್ಯಾ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾವ್ ಸಲ್ವಾನ್ಹಾ ಅವರು ನೆರೆದಿದ್ದ ಸಾವಿರಾರು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಸಂದೇಶ ನೀಡಿದ ಅವರು, “ಮಕ್ಕಳು ದೇವರ ರಾಜ್ಯದ ಫಲಗಳು ಮತ್ತು ನಮ್ಮ ಧರ್ಮಕ್ಷೇತ್ರದ ಅತಿದೊಡ್ಡ ಸಂಪತ್ತು. ದೇವರ ರಾಜ್ಯದ ಮಕ್ಕಳಾದ ನೀವು ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ನೀವೆಲ್ಲರೂ ನಮ್ಮ ಕುಟುಂಬವಿದ್ದಂತೆ, ನಿಮ್ಮನ್ನು ರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆಯಾಗಿದೆ,” ಎಂದು ಅಭಯ ನೀಡಿದರು
.ಬಳಿಕ ಬಿಷಪ್ ಅವರ ನೇತೃತ್ವದಲ್ಲಿ ವಿಶೇಷ ಮಕ್ಕಳ ಬಲಿಪೂಜೆ ನೆರವೇರಿತು. ಶ್ರೇಷ್ಠಗುರುಗಳಾದ ಮೊನ್ಸಿಫೋರ್ ಮ್ಯಾಕ್ಸಿಮ್ ನೊರೊನ್ಹಾ ಕುಲಪತಿ ವಂದನೀಯ ಡಾ. ವಿಕ್ಸರ್ ಜಾರ್ಜ್ ಡಿ’ಸೋಜ, ವಾಮಂಜೂರು ಚರ್ಚ್ನ ಧರ್ಮಗುರು ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ಅನೇಕ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. 100 ಮಕ್ಕಳ ಗಾಯನ ಮಂಡಳಿಯು ಬಲಿಪೂಜೆಯ ಭಕ್ತಿಭಾವವನ್ನು ಹೆಚ್ಚಿಸಿತು.
ಮಕ್ಕಳ ರಕ್ಷಣೆ ಮತ್ತು ಕಾನೂನು ಅರಿವು: ‘ಮಕ್ಕಳ ಸುರಕ್ಷತೆಯೇ ನಮ್ಮ ಆದ್ಯತೆ ಎಂಬ ಧೈಯದೊಂದಿಗೆ,ಕರ್ನಾಟಕ ಪ್ರಾದೇಶಿಕ ಶಿಕ್ಷಣ ಆಯೋಗದ ಕಾರ್ಯದರ್ಶಿ ಹಾಗೂ ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ವಂದನೀಯ ಫಾದರ್ ಫ್ರಾನ್ಸಿಸ್ ಅಸ್ಸಿಸಿ ಅಲ್ವೇಡಾ ಅವರು ಮಕ್ಕಳ ರಕ್ಷಣೆ ಹಾಗೂ ಮಾನವ ಘನತೆಯ ಕುರಿತು ಜಾಗೃತಿ ಮೂಡಿಸಿದರು. ವಾಮಂಜೂರು ಚರ್ಚ್, ಐಸಿವೈಎಂ (ICYM), ವೈಸಿಎಸ್ (YCS) ಮತ್ತು ಇತರ ಚರ್ಚ್ಗಳ ಸುಮಾರು 1000ಕ್ಕೂ ಹೆಚ್ಚು ಅನಿಮೇಟರ್ಗಳು ಮತ್ತು ಸ್ವಯಂಸೇವಕರ ಸಮ್ಮುಖದಲ್ಲಿ ಕಿರುಕುಳವನ್ನು ತಡೆಗಟ್ಟುವ ಕುರಿತು ಪ್ರಾಯೋಗಿಕ ಹಾಗೂ ಕಾನೂನು ಮಾಹಿತಿಯನ್ನು ಅವರು ಒದಗಿಸಿದರು.
ಸ್ಫೂರ್ತಿದಾಯಕ ಅನುಭವ ಹಂಚಿಕೆ: ‘ಕುಟುಂಬ, ನಂಬಿಕೆ, ಜವಾಬ್ದಾರಿ ಮತ್ತು ಧೈರ್ಯ’ ಎಂಬ ವಿಷಯದಡಿನಡೆದ ಸಂವಾದದಲ್ಲಿ ಗಣ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ದುಬೈ ಮತ್ತು ಮಂಗಳೂರಿನ ಉದ್ಯಮಿ ಹಾಗೂ ದಾನಿ ಮೈಕಲ್ ಡಿ’ಸೋಜ ಮಾತನಾಡಿ, “ತಂದೆ-ತಾಯಿ, ಮಾತೃಭಾಷೆ ಮತ್ತು ಮಾತೃಭೂಮಿಯನ್ನು ಎಂದಿಗೂ ಮರೆಯದಿರಿ. ನಿಮ್ಮ ಬಾಲ್ಯವನ್ನು ಜವಾಬ್ದಾರಿಯುತವಾಗಿ ಕಳೆದು ಉಜ್ವಲ ಭವಿಷ್ಯಕ್ಕಾಗಿ ಸಿದ್ಧರಾಗಿ,” ಎಂದು ಕಿವಿಮಾತು ಹೇಳಿದರು. ಶಿಕ್ಷಕ ದಂಪತಿ ಕೈಮೆಂಟ್ ಪಿಂಟೋ – ರೇಷ್ಮಾ ಮೇರಿ ರೆಬೆಲ್ಲೊ ವಿಜಯ್ – ಲವೀನಾ ಶಾಂತಿ ಡಿ’ಸೋಜ ದಂಪತಿ, ವಿದ್ಯಾರ್ಥಿನಿ ಎಸ್ತರ್ ಗ್ರೇಸ್ ಫೆರ್ನಾಂಡಿಸ್ ಮತ್ತು ವೈಸಿಎಸ್/ವೈಎಸ್ಎಂ (YCS/YSM) ರಾಷ್ಟ್ರೀಯ ಸಂಚಾಲಕ ಅನ್ಸನ್ ಕೈಮೆಂಟ್ ನಜರೆತ್ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು, ಮನೋಜ್ ಫೆರ್ನಾಂಡಿಸ್ ಈ ಗೋಷ್ಠಿಯನ್ನು ನಿರ್ವಹಿಸಿದರು.
ಆಕರ್ಷಕ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ: ಬೆಳಗ್ಗೆ ನಡೆದ ಭವ್ಯ ಮೆರವಣಿಗೆಯಲ್ಲಿ 125ಮಕ್ಕಳು 125 ಪಾಲಕ ಸಂತರ ವೇಷಧರಿಸಿ ಗಮನ ಸೆಳೆದರು. 12 ವಲಯಗಳ ವತಿಯಿಂದ ಬೈಬಲ್ ಆಧಾರಿತ ‘ರಕ್ಷಣೆಯ ಇತಿಹಾಸ ಸಾರುವ ಸ್ತಬ್ಧಚಿತ್ರಗಳು ಪ್ರದರ್ಶನಗೊಂಡವು.ಫಾದರ್ ಅಬೆಲ್ ಲೋಬೊ ಸಂಯೋಜಿಸಿದ ಪ್ರಾರ್ಥನಾ ನೃತ್ಯವನ್ನು ವಿವಿಧ ಚರ್ಚ್ಗಳ ಮಕ್ಕಳು ಪ್ರಸ್ತುತಪಡಿಸಿದರು. ಫಾದರ್ ರೊನಾಲ್ಡ್ ಡಿ’ಸೋಜ ಸಂಯೋಜಿಸಿದ ‘ನಿನಾದ್’ ಥೀಮ್ ಹಾಡಿಗೆ ಐಸಿವೈಎಂ ಯುವಕರು ಹೆಜ್ಜೆಹಾಕಿದರು.ವಾಮಂಜೂರಿನ ಕುಮಾರಿ ಪ್ರಿಶಾ ಮೆನೆಜಿಸ್ ಮತ್ತು ಅಂಜೆಲೊರಿನ ಪ್ರಿನ್ಸನ್ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ನಿನಾದ್ 2K26 ಸಂಚಾಲಕ ಫಾ. ಅಲ್ವಿನ್ ರಿಚರ್ಡ್ ಡಿ’ಸೋಜ ವಂದಿಸಿದರು.






