ಮಂಗಳೂರು: ಸುಹಾಸ್ ಶೆಟ್ಟಿ ಮನೆಯವರು ಕರೆದರೆ ಅವರ ಮನೆಗೂ ಹೋಗುತ್ತೇನೆ ಹಾಗೂ ಅಬ್ದುಲ್ ರೆಹಮಾನ್ ಕೊಲೆ ತನಿಖೆಯನ್ನು ಎನ್‌ಐಗೆ ವಹಿಸುವಂತೆ ಆತನ ಮನೆಯವರು ಕೇಳಿದರೆ ರಾಜ್ಯ ಸರ್ಕಾರ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ. ಪವಿತ್ರ ಹಜ್ ಯಾತ್ರೆಯಿಂದ ಮರಳಿದ ನಂತರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಗರದ ಸೌರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬ್ದುಲ್ ರೆಹಮಾನ್ ಮನೆಯವರು ಕೊಲೆಯಾದ ದಿನವೇ ನನಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಅದರಂತೆ ನಾನು ಊರಿಗೆ ಮರಳಿದ ನಂತರ ಮನೆಗೆ ಭೇಟಿ ಕೊಡುತ್ತೇನೆಂದು ಹೇಳಿದ್ದೆ. ಅದರಂತೆ ನಿನ್ನೆ ಆತನ ಮನೆಗೆ ಭೇಟಿ ನೀಡಿದ್ದೇನೆ. ಸುಹಾಸ್ ಶೆಟ್ಟಿ ಮನೆಯವರು ಕರೆದರೆ ಅವರ ಮನೆಗೂ ಹೋಗುತ್ತೇನೆ ಎಂದರು. ನಂತರ ಮುಂದುವರೆದ ಅವರು, ನಾವೆಲ್ಲರೂ ಸೌಹಾರ್ದ ಸಮಾಜದ ನಿರ್ಮಾಣದ ಜವಾಬ್ದಾರಿ ವಹಿಸಕೊಳ್ಳಬೇಕು.
ಆಗ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ. ಯಾವುದೇ ಧರ್ಮ ಮನುಷ್ಯನ ಮನಸ್ಸಿಗೆ ಮತ್ತು ದೇಹಕ್ಕೆ ಗಾಯ ಮಾಡುವಂತಾಗಿರಬಾರದು. ಒಬ್ಬರ ಪರ ನಿಂತು ಮಾತನಾಡುವುದು ಸುಲಭ ಹಾಗೂ ಹೇಗೆ ಬೇಕಾದರೂ ಮಾತನಾಡಬಹುದು. ಆದರೆ ಇಬ್ಬರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಬಲು ಕಷ್ಟ. ಆ ಜವಾಬ್ದಾರಿಯನ್ನು ಪ್ರತಿಯೊಬ್ಬರು ಹೊರಬೇಕು. ಇದರಲ್ಲಿ ಪೊಲೀಸರ ಕರ್ತವ್ಯವೂ ಮುಖ್ಯ. ಅವರ ನಿಷ್ಪಕ್ಷ ತನಿಖೆ ಹಾಗೂ ಸ್ಪಂದನೆ ಸಿಗಬೇಕು. ಅದು ಸಿಗದಿದ್ದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಯಾರು ಯಾರನ್ನು ಕೊಲ್ಲುವ ಅಧಿಕಾರ ಕೊಟ್ಟಿಲ್ಲ. ಯಾರಿಗೂ ಪ್ರಚೋದನಕಾರಿ ಮಾತನಾಡಲು ಅವಕಾಶ ಕೊಡಬಾರದು ಎಂದರು.
ಈ ಹಿಂದಿನ ಎಸ್ಪಿಹಾಗೂ ಕಮೀಷನರ್‌ಗೆ ದ್ವೇಷ ಭಾಷಣ ಹಾಗೂ ಸಂದೇಶ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದೆ. ಇದೀಗ ಹೊಸ ಅಧಿಕಾರಿಗಳ ಆಗಮನದ ನಂತರ ಇದಕ್ಕೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ಹಿಂದಿನ ಅಧಿಕಾರಿಗಳು ಕ್ರಮ ಕೈಗೊಳ್ಳಲು ಯಾಕಾಗಿಲ್ಲ ಎಂಬ ಬಗ್ಗೆ ತನಿಖೆಯಾಗಬೇಕು ಎಂದರು.
ಸುಹಾಸ್ ಶೆಟ್ಟಿ ಕೊಲೆಯಾದ ನಂತರ ಪ್ರತೀಕಾರದ ಕೊಲೆ ನಡೆಯುತ್ತದೆ ಎಂದು ಪೊಲೀಸ್ ಇಲಾಖೆ ಸಹಿತ ಎಲ್ಲರಿಗೂ ತಿಳಿದಿತ್ತು. ಮನೆಗೆ ಸಹಾಯಕ್ಕೆ ಕರೆಸಿ, ಆತನಿಂದ ಕೆಲಸ ಮಾಡಿಸಿ ಕೂಲಿ ಕೊಡುವ ಬದಲು ಕೊಲೆ ಮಾಡಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸೌಹಾರ್ದತೆ ಧಕ್ಕೆ ಉಂಟಾಗುತ್ತದೆ. ಎರಡೂ ಕಡೆಯ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದರು.