LATEST NEWS

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಲು ಸಚಿವ ಯು. ಟಿ. ಖಾದರ್ ಅವರಿಗೆ ಮನವಿ

ಮಂಗಳೂರು: ಕರಾವಳಿ ಭಾಗದ ಜನರ ಬಹುಕಾಲದ ಕನಸು ಹಾಗೂ ಕರಾವಳಿಯ ಅಸ್ಮಿತೆಯಾಗಿರುವ ತುಳು ಭಾಷೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಅವರಿಗೆ ಕಾಂಗ್ರೆಸ್ ನಿಯೋಗವು ಅಧಿಕೃತ ಮನವಿ ಪತ್ರ ಸಲ್ಲಿಸಿದೆ.

ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ನೇತೃತ್ವದ ನಿಯೋಗವು ಸಚಿವರನ್ನು ಖುದ್ದಾಗಿ ಭೇಟಿಯಾಗಿ ಕರಾವಳಿ ಜನರ ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿತು.

ತುಳು ಭಾಷೆಯು ತನ್ನದೇ ಆದ ಸುದೀರ್ಘ ಇತಿಹಾಸ ಹಾಗೂ ಶ್ರೀಮಂತ ಸಾಹಿತ್ಯ ಸಂಸ್ಕೃತಿಯನ್ನು ಹೊಂದಿದೆ. ಮುಂಬರುವ ರಾಜ್ಯ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ವಿಷಯವನ್ನು ಮಂಡಿಸಬೇಕು. ಅದಕ್ಕೆ ಪ್ರಮುಖ ಆದ್ಯತೆ ನೀಡಿ ಗಂಭೀರವಾಗಿ ಚರ್ಚಿಸಬೇಕು ಮತ್ತು ಕರಾವಳಿಯ ಜನರ ಭಾವನೆಗಳಿಗೆ ಸ್ಪಂದಿಸಿ ಸೂಕ್ತ ಗೌರವ ಸಿಗುವಂತೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನಿಯೋಗವು ಸಚಿವರಲ್ಲಿ ಕಳಕಳಿಯಿಂದ ವಿನಂತಿಸಿತು.

ಕರಾವಳಿ ಜಿಲ್ಲೆಗಳ ಲಕ್ಷಾಂತರ ಜನರ ಮಾತೃಭಾಷೆಯಾದ ತುಳು ಭಾಷೆಗೆ ಭಾರತೀಯ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ ಸಿಗಬೇಕಾದರೆ, ಮೊದಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಅಧಿಕೃತ ಮಾನ್ಯತೆ ಸಿಗುವುದು ಅನಿವಾರ್ಯವಾಗಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಈ ದಶಕಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.

ಮನವಿ ಸಲ್ಲಿಸುವ ನಿಯೋಗದಲ್ಲಿ ಪ್ರಮುಖರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಮೋಹನ್ ಶೆಟ್ಟಿ ಪಂಜಿಕಲ್ಲು, ಮಧುಸೂದನ ಶೆಣೈ, ನವೀನ್ ಡಿಸೋಜ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ದರು.

Share News