ಮಂಗಳೂರು, : ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್, ಹೆಕ್ಸಾಟ್ರಾನ್ ಹೆಲ್ತ್‌ಕೇರ್‌ನ ಬ್ರ್ಯಾಂಡ್ ಆಗಿರುವ FAME ಅಕಾಡೆಮಿಯ ಸಹಯೋಗ ದೊಂದಿಗೆ ಹಮ್ಮಿಕೊಂಡಿರುವ ಪ್ಯಾಲಿಯೇಟಿವ್ ಕೇರ್ (ಉಪಶಮನಕಾರಿ ಆರೈಕೆ) ಕುರಿತಾದ ಎರಡು ದಿನಗಳ ಶೈಕ್ಷಣಿಕ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ‘PALLINEXUS 2026’ ಚಾಲನೆ ಪಡೆಯಿತು.

“ಆರೈಕೆಯಲ್ಲಿ ಕರುಣೆ, ಅಭ್ಯಾಸದಲ್ಲಿ ಶ್ರೇಷ್ಠತೆ – ಪ್ಯಾಲಿಯೇಟಿವ್ ಕೇರ್‌ನಲ್ಲಿ ಭವಿಷ್ಯದ ನರ್ಸ್‌ಗಳನ್ನು ಸಬಲೀಕರಿಸುವುದು” ಎಂಬ ಧ್ಯೇಯವಾಕ್ಯದಡಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವೈದ್ಯಕೀಯ ಆರೈಕೆ ಕೇವಲ ಚಿಕಿತ್ಸೆಗೆ ಸೀಮಿತವಾಗಿರ ಬಾರದು: ಡಾ. ರೋಹನ್ ಚಂದ್ರ ಆರ್. ಗಟ್ಟಿ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ರೋಹನ್ ಚಂದ್ರ ಆರ್. ಗಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ವೈದ್ಯಕೀಯ ಮತ್ತು ನರ್ಸಿಂಗ್ ಆರೈಕೆ ಎನ್ನುವುದು ಕೇವಲ ಚಿಕಿತ್ಸೆ ಹಾಗೂ ಕ್ಲಿನಿಕಲ್ ವಿಧಾನಗಳಿಗೆ ಸೀಮಿತವಾಗಿರಬಾರದು. ರೋಗಿಗಳು ಮತ್ತು ಅವರ ಕುಟುಂಬದವರ ಭಾವನಾತ್ಮಕ ಅಗತ್ಯಗಳನ್ನು ಅರ್ಥಮಾಡಿ ಕೊಳ್ಳುವುದು, ಸಹಾನುಭೂತಿಯಿಂದ ಸಂವಹನ ನಡೆಸುವುದು ಹಾಗೂ ಕಷ್ಟದ ಸಂದರ್ಭಗಳಲ್ಲಿ ರೋಗಿಯ ಘನತೆಯನ್ನು ಗೌರವಿಸುವುದು ಅತ್ಯಂತ ಮುಖ್ಯ. ಇದು ಆರೋಗ್ಯ ಸೇವೆಯ ಅತ್ಯಂತ ಮಾನವೀಯ ಆಯಾಮವಾಗಿದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್‌ನ ಸಂಚಾಲಕ ರೆ ವ. ಫಾ. ಐವನ್ ಮೈಕಲ್ ರೊಡ್ರಿಗಸ್ ಮಾತನಾಡಿ, “ಭವಿಷ್ಯದ ಶುಶ್ರೂಷಕಿಯರನ್ನು ಉತ್ತಮ ಪ್ರಾಯೋಗಿಕ ಕೌಶಲ್ಯಗಳು ಹಾಗೂ ಕರುಣಾಮಯ ಕ್ಲಿನಿಕಲ್ ಸಾಮರ್ಥ್ಯದೊಂದಿಗೆ ಸಜ್ಜುಗೊಳಿಸುವುದು ಇಂದಿನ ಅಗತ್ಯವಾಗಿದೆ. ನರ್ಸ್‌ಗಳ ಸಾಂತ್ವನದ ನುಡಿ, ಸಹಾನುಭೂತಿ ಮತ್ತು ಗಮನವಿಟ್ಟು ಆಲಿಸುವ ಮನೋಭಾವವು ರೋಗಿಗಳಿಗೆ ನೆಮ್ಮದಿ ನೀಡುತ್ತದೆ. ದೈಹಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಒಳಗೊಂಡ ಸಮಗ್ರ ಆರೈಕೆಗೆ ಒತ್ತು ನೀಡಬೇಕು” ಎಂದರು.

FAME ಅಕಾಡೆಮಿಯ ನಿರ್ದೇಶಕ ಹಾಗೂ ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಡಾ. ರಾಘವೇಂದ್ರ ಬಿ. ಎಚ್. ಮಾತನಾಡಿ, “ಭವಿಷ್ಯದ ಶುಶ್ರೂಷಕಿಯರು ಸಮರ್ಥ ಹಾಗೂ ಕರುಣಾಮಯ ಆರೈಕೆ ನೀಡಲು ಅಗತ್ಯವಾದ ಜ್ಞಾನ, ಕ್ಲಿನಿಕಲ್ ಕೌಶಲ್ಯ, ಸಂವಹನ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುವುದು ಅಗತ್ಯ” ಎಂದು ತಿಳಿಸಿದರು.

ಕಾರ್ಯಕ್ರಮದ ಮೊದಲ ದಿನ ಪ್ಯಾಲಿಯೇಟಿವ್ ಕೇರ್‌ನ ಮೂಲಭೂತ ಅಂಶಗಳು ಹಾಗೂ ರೋಗಲಕ್ಷಣಗಳ ನರ್ಸಿಂಗ್ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ಒಟ್ಟು 113 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.


ವೇದಿಕೆಯಲ್ಲಿ FAME ಅಕಾಡೆಮಿಯ ತಜ್ಞರಾದ ಶ್ರೀ ಆಕಾಶ್ ಎಚ್. ಎ., ಶ್ರೀ ರಾಜಶೇಖರ್ ಎಸ್., ಕುಮಾರಿ ಥೆರೋನಿಕಾ ರೀನಾ, ಶ್ರೀ ರಾಹುಲ್ ಎಸ್. ವಾಲಿಕರ್ ಹಾಗೂ ಕುಮಾರಿ ಪಾಪ್ಪಿ ಬರ್ಮನ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಡಾ. ಡಯಾನಾ ಲೋಬೋ ಸ್ವಾಗತಿಸಿದರು. ಸಹಾಯಕ ಉಪನ್ಯಾಸಕಿ ಶ್ರೀಮತಿ ಡಯಾನಾ ಡಿ’ಲಿಮಾ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲೆ ಹಾಗೂ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಕುಟಿನ್ಹಾ ವಂದಿಸಿದರು.





