LATEST NEWS

ನೂತನ ತುಳು ಸಿನಿಮಾ ‘ಪಟ್ ಪಟ್ ಪಟಾಕಿ’ಯ ಶೀರ್ಷಿಕೆ ಅನಾವರಣ

ಮಂಗಳೂರು: ಯಶಸ್ವಿ ಉದ್ಯಮಿಯಾಗಿ, ಸಮಾಜ ಸೇವಾ ಮನೋಭಾವನೆಯ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಜಾನ್ ವಿಲ್ಸನ್ ಲೋಬೋ ಅವರಂತಹ ವ್ಯಕ್ತಿಗಳಿಂದ ತುಳುನಾಡಿನ ಕಲೆ-ಕಲಾವಿದರಿಗೆ ವಿಶೇಷ ಪ್ರೋತ್ಸಾಹ ಸಿಕ್ಕಿದೆ. ಇಂತಹ ಮನೋಭಾವನೆಯ ವ್ಯಕ್ತಿಗಳು ಹೆಚ್ಚಾಗಬೇಕು ಹಾಗೂ ಸಮಾಜವು ಸಹ ಅವರನ್ನು ಆದರಿಸಬೇಕು ಎಂದು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೋ ಹೇಳಿದರು.

ಅವರು ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ಲೋಬೋ ಪ್ರೋಡಕ್ಷನ್‌ನ ಮೂಲಕ ಸೋನುಲವಿ ಸಿನೇ ಕ್ರಿಯೇಶನ್ಸ್‌ನ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ತುಳು ಸಿನಿಮಾ ‘ಪಟ್ ಪಟ್ ಪಟಾಕಿ’ಯ ಶೀರ್ಷಿಕೆಯನ್ನು ವಿಶಿಷ್ಠವಾಗಿ ನಿರ್ಮಿಸಿದ ಪಟಾಕಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಸಿನಿಮಾವೂ ಬದುಕಿನ ಭಾಗ:
ಸೈಂಟ್ ಸೆಬಾಸ್ಟಿಯನ್ ಚರ್ಚ್, ಪೆರ್ಮನ್ನೂರು, ತೊಕ್ಕೊಟ್ಟುವಿನ ಧರ್ಮಗುರು ರೆ.ಫಾ. ಆಂಡ್ರೋ ಲಿಯೋ ಡಿಸೋಜಾ ಆಶೀರ್ವಚನ ನೀಡಿ, ಸಮಾಜದಲ್ಲಿ ತುಳು ಸಿನಿಮಾವೂ ಬದುಕಿನ ಭಾಗವಾಗಿದೆ ಎಂದರು. ಲೋಬೋ ಪ್ರೋಡಕ್ಷನ್‌ನ ಮಾಲೀಕ ಜಾನ್ ವಿಲ್ಸನ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಹೊಸತನಕ್ಕೆ ಜನರ ಆಶೀರ್ವಾದ:
ಚಿತ್ರದ ಶೂಟಿಂಗ್ ಕ್ಲಾಪ್‌ನ್ನು ನಿರ್ದೇಶಕ ದೇವಿಪ್ರಕಾಶ್ ಎಸ್ ಅವರಿಗೆ ಹಸ್ತಾಂತರಿಸಿದ ಮಂಗಳೂರಿನ ಚಾ ಪರ್‍ಕ ಕಲಾವಿದರ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮಾತನಾಡಿ, “ಚಿತ್ರರಂಗದಲ್ಲಿ ಹೊಸತನ ನೀಡುವ ಪ್ರಯತ್ನ ಮಾಡಿದಾಗ ಮಾತ್ರ ಜನರು ಆಶೀರ್ವದಿಸುತ್ತಾರೆ. ನಿಷ್ಠೆಯಿಂದ ಮಾಡಿದ ಸಿನಿಮಾಕ್ಕೆ ಕಲಾವಿದರು ಬದ್ಧತೆಯಿಂದ ಬಿಡುಗಡೆಯ ನಂತರವೂ ಸಹಕರಿಸಿದಲ್ಲಿ ಸಿನಿಮಾ ಜನರಿಗೆ ತಲುಪುತ್ತದೆ. ಇಂತಹ ಕಾರ್ಯಕ್ಷಮತೆಯ ಕಲಾವಿದರಿಗೆ ಭವಿಷ್ಯವಿದೆ” ಎಂದರು.

ಕರ್ನಾಟಕ ಸರ್ಕಾರದ ಪರಿಸರ ಮತ್ತು ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಕ್ಯಾಮರಾ ಚಾಲನೆ ಮಾಡಿ ಶುಭ ಹಾರೈಸಿದರು. ಸಿನಿಮಾದ ತಂತ್ರಜ್ಞರನ್ನು ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಗೌರವಿಸಿದರು. ಸಿನಿಮಾದಲ್ಲಿ ಅಭಿನಯಿಸುವ ಕಲಾವಿದರನ್ನು ನಮ್ಮ ಕುಡ್ಲ ವಾಹಿನಿಯ ಅಧ್ಯಕ್ಷ ಲೀಲಾಕ್ಷ ಕರ್ಕೇರ ಸನ್ಮಾನಿಸಿದರು. ಕಿನ್ನಿಗೋಳಿಯ ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ನಿರ್ಮಾಪಕ ಜಾನ್ ವಿಲ್ಸನ್ ಲೋಬೋ ಹಾಗೂ ಹಿರಿಯ ರಂಗಭೂಮಿ ಕಲಾವಿದ ಡೊಲ್ಲಂ ಮಂಗಳೂರು ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ನಟ ಉಮೇಶ್… ಮಿಜಾರ್, ಮಂಗಳೂರಿನ ಎಕ್ಸ್‌ಪ್ರೆಶನ್ ಆರ್ಟ್ಸ್‌ನ ಈಶ್ವರ್ ಕೋಡಿಕಲ್, ನೋರಾಸ್ ಹಿಸ್ಟೋಲಾಜಿ ರಿಸರ್ಚ್ ಲ್ಯಾಬ್‌ನ ಮಾಲೀಕ ನವೀನ್ ಲ್ಯಾನ್ಸಿ ಸಾಲ್ಡಾನ, ಮಂಗಳೂರಿನ ಡೀನೆಟ್ ಇಂಟರ್‌ನೆಟ್ ಪ್ರೈ. ಲಿ. ಸರ್ವಿಸ್‌ನ ಫ್ರಾನ್ಸಿಸ್… ಲೋಬೋ ಮತ್ತಿತರರು ಉಪಸ್ಥಿತರಿದ್ದರು.

ಸಿನಿಮಾದ ನಿರ್ಮಾಣ-ನಿರ್ವಹಣೆಯ ನರೇಂದ್ರ ಕೆರೆಕಾಡು ಸ್ವಾಗತಿಸಿದರು. ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ನಿರ್ದೇಶಕ ದೇವಿಪ್ರಕಾಸ್ ಎಸ್. ಪ್ರಸ್ತಾವನೆಗೈದರು. ಸೋನುಲವಿ ಸಿನೆ ಕ್ರಿಯೇಶನ್ಸ್‌ನ ರೋಶನ್ ನೆಲ್ಲಿಗುಡ್ಡೆ ವಂದಿಸಿದರು. ಕಲಾವಿದ ಸುನಿಲ್ ಡಿಸೋಜಾ ಪರಿಚಯಿಸಿದರು. ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಖೃತ ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಭಗವಾನ್ ಸುರತ್ಕಲ್, ಲಿಯೋ ರಾಣಿಪುರ, ಚಿತ್ರಲೇಖ ಸುರತ್ಕಲ್ ಹಾಗೂ ಮಂಜುಷಾ ಸುರತ್ಕಲ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.

Share News