ಮಂಗಳೂರು: ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಶ್ರೇಷ್ಠತೆ ಪಡೆದುಕೊಳ್ಳಲು ಅದನ್ನು ಬರೆದ ಮಹರ್ಷಿ ವಾಲ್ಮೀಕಿಯವರ ಕೊಡುಗೆಯೇ ಕಾರಣವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ವಾಲ್ಮೀಕಿ ಬರಹ, ಅದನ್ನು ಪ್ರಸ್ತುತಪಡಿಸಿದ ಶೈಲಿಯಿಂದಾಗಿಯೇ ರಾಮಾಯಣವು ಶ್ರೇಷ್ಠ ಗ್ರಂಥ ಎನಿಸಿಕೊಂಡಿತು. ಈ ಗ್ರಂಥವು ನವರಸಗಳು ಇರುವ ಮಹಾಕಾವ್ಯವಾಗಿದೆ. ಕ್ರಿಸ್ತಪೂರ್ವ 5ನೇ ಶತಮಾನದಲ್ಲಿಯೇ ಇಂತಹ ಕೊಡುಗೆ ನೀಡಿದ ವಾಲ್ಮೀಕಿಯವರ ಜ್ಞಾನ ಮತ್ತು ಕೆಲಸವು ಅದ್ಭುತವಾಗಿದೆ. 7 ಕಾಂಡಗಳಲ್ಲಿ 24 ಸಾವಿರ ಶ್ಲೋಕಗಳನ್ನೂ ಬರೆಯುವ ಮೂಲಕ ಅವರು ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು ಕಾರ್ಯಕ್ರಮ ಉದ್ಘಾಟಿಸಿ, ಪರಿಶಿಷ್ಟ ಪಂಗಡಗಳ, ಗಿರಿಜನರ ಕಲ್ಯಾಣಕ್ಕಾಗಿ ಕರ್ನಾಟಕ ಸರಕಾರವು ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದೆ. ಈ ಸಮುದಾಯಗಳ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಅವರಿಗೆ ಅರ್ಹವಾದ ಸೌಲಭ್ಯಗಳನ್ನು ಅವರ ಮನೆಬಾಗಿಲಿಗೆ ತಲುಪಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಮಹರ್ಷಿ ವಾಲ್ಮೀಕಿಯವರಿಂದ ರೂಪುಗೊಂಡ ರಾಮಾಯಾಣವು, ಪ್ರತಿಯೊಂದು ಪೀಳಿಗೆಗೂ ಅನ್ವಯವಾಗುತ್ತದೆ. ಈ ಕೃತಿಯ ಮೌಲ್ಯವನ್ನು ನಾವು ಸದಾ ಪಾಲಿಸಬೇಕು ಎಂದು ಹೇಳಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇಣಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಡಿಸಿಪಿ ಸ್ಯಾಮುವೆಲ್ ವರ್ಗೀಸ್, ಎಎಸ್ಪಿ ಅನಿಲ್ಕುಮಾರ್ ಭೂಮಿರೆಡ್ಡಿ, ಡಿಸಿಆರ್ಇ ಪೊಲೀಸ್ ಅಧೀಕ್ಷಕ ಸೈಮನ್ ಮತ್ತಿತರರು ಉಪಸ್ಥಿತರಿದ್ದರು.
ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಬಸವರಾಜು ಸ್ವಾಗತಿಸಿದರು. ಮಂಜುಳಾ ವಂದಿಸಿದರು.
ಎಸ್.ಎಸ್.ಎಲ್.ಸಿ. ಸಾಧಕರಿಗೆ ಒಂದು ಲಕ್ಷ ರೂ. ಬಹುಮಾನ ಕಾರ್ಯಕ್ರಮದಲ್ಲಿ ಕಳೆದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಪಡೆದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕರ್ನಾಟಕ ಸರಕಾರದ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನ ಪಡೆದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ರೂ. 1 ಲಕ್ಷ ರೂ. ನಗದು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 619 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಅಶ್ವಿತ ಎಂ.ಡಿ.( ಸರಕಾರಿ ಜೂನಿಯರ್ ಕಾಲೇಜು, ಸುಳ್ಯ) ಹಾಗೂ ನೀಲ್ ಕಮಲ್ ಎಸ್. ಕಳ್ಳಿಮನಿ ( ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ) ಇವರಿಗೆ ತಲಾ 1 ಲಕ್ಷ ರೂ. ಬಹುಮಾನ ಮತ್ತು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
