DAKSHINA KANNADALATEST NEWS

ಮಂಗಳೂರಿನಲ್ಲಿ ರಾಷ್ಟ್ರಭಕ್ತರ ವೇದಿಕೆಯಿಂದ ಭವ್ಯ ತಿರಂಗಾ ಯಾತ್ರೆ: ಸಾವಿರಾರು ನಾಗರಿಕರ ಭಾಗಿ

ಮಂಗಳೂರು, ಆಗಸ್ಟ್ 12: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಭಕ್ತರ ವೇದಿಕೆ, ಮಂಗಳೂರು ದಕ್ಷಿಣ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ‘ತಿರಂಗಾ ಯಾತ್ರೆ’ಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು ಮತ್ತು ಯುವ ಪೀಳಿಗೆ ದೇಶಪ್ರೇಮದ ಜಯಘೋಷಗಳೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನ ಬಳಿಯ ರಾಜಾಜಿ ಪಾರ್ಕ್‌ನಿಂದ ಆರಂಭಗೊಂಡ ಈ ಭವ್ಯ ಮೆರವಣಿಗೆಯು ಗೋವಿಂದ ಪೈ ನವಭಾರತ್ ಸರ್ಕಲ್‌ವರೆಗೆ ಸಾಗಿತು. ಯಾತ್ರೆಯುದ್ದಕ್ಕೂ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೃಹತ್ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು, ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಸಂಭ್ರಮದಿಂದ ಸಾಗಿದರು.

ಯಾತ್ರೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು, “ಸ್ವಾತಂತ್ರ್ಯದ ಕದನ ಕಲಿಗಳ ನಿರಂತರ ಹೋರಾಟ ಹಾಗೂ ತ್ಯಾಗದ ಫಲವಾಗಿ ಇಂದು ನಾವೆಲ್ಲರೂ ಈ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುತ್ತಿದ್ದೇವೆ. ತ್ರಿವರ್ಣ ಧ್ವಜವು ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದ್ದು, ಪ್ರತಿಯೊಬ್ಬ ನಾಗರಿಕನೂ ಅದರೆಡೆಗೆ ಸದಾ ಗೌರವವನ್ನು ಹೊಂದಿರಬೇಕು” ಎಂದು ಕರೆ ನೀಡಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, “ತಿರಂಗಾ ಯಾತ್ರೆಯಲ್ಲಿ ಯುವ ಪೀಳಿಗೆಯು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮತ್ತು ಉತ್ಸಾಹದಿಂದ ಭಾಗವಹಿಸುತ್ತಿರುವುದು ನಮ್ಮ ರಾಷ್ಟ್ರದ ಉಜ್ವಲ ಹಾಗೂ ಉತ್ತಮ ಭವಿಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸತೀಶ್ ಕುಂಪಲ, ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಪೂರ್ಣಿಮಾ ಎಂ, ಸುಜಿತ್ ಪ್ರತಾಪ್, ಸಂಜಯ್ ಪ್ರಭು, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಮಂಜುಳಾ ರಾವ್, ವಿಕಾಸ್ ಪುತ್ತೂರು, ನಂದನ್ ಮಲ್ಯ, ಅಶ್ವಿತ್ ಕೊಟ್ಟಾರಿ, ಅರುಣ್ ಜಿ. ಶೇಟ್, ಮಹೇಶ್ ಜೋಗಿ, ಋತ್ವಿಕ್ ಕದ್ರಿ, ಸಚಿನ್ ರೈ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಮೋನಪ್ಪ ಭಂಡಾರಿ ಹಾಗೂ ನಿಕಟಪೂರ್ವ ಪಾಲಿಕೆ ಸದಸ್ಯರು ಸೇರಿದಂತೆ ನೂರಾರು ಸಂಘಟನಾ ಪ್ರಮುಖರು ಉಪಸ್ಥಿತರಿದ್ದರು.

Share News