ಮಂಗಳೂರು, ಆ. 12: ತುಳುನಾಡಿನ ಸಾಂಪ್ರದಾಯಿಕ ಆಟಿ ಅಮಾವಾಸ್ಯೆಯ ಪ್ರಯುಕ್ತ ನಗರದ ಅಳಕೆ ಸ್ಯಾನ್‌ಪ್ಲೋ ಕಾಂಪ್ಲೆಕ್ಸ್‌ನಲ್ಲಿರುವ ಸುವರ್ಣ ಕ್ಲಿನಿಕ್ ಹಾಗೂ ಪ್ರಕೃತಿ ಆಯುರ್ವೇದ ಪಂಚಕರ್ಮ ಸೆಂಟರ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ‘ಆಟಿ ಕಷಾಯ’ ವಿತರಣಾ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ನಗರದಾದ್ಯಂತದ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಸಾರ್ವಜನಿಕರು ಭೇಟಿ ನೀಡಿ ಉಚಿತ ಕಷಾಯದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಚಾಲನೆ ನೀಡಿದ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರು ಮಾತನಾಡಿ, “ತುಳುನಾಡಿನ ವಿಶಿಷ್ಟ ಆಟಿ ಆಚರಣೆ ಮತ್ತು ಈ ದಿನ ಸೇವಿಸುವ ಆಟಿ ಕಷಾಯಕ್ಕೆ ಆಯುರ್ವೇದದಲ್ಲಿ ಹಾಗೂ ನಮ್ಮ ಸಂಸ್ಕೃತಿಯಲ್ಲಿ ಅಪಾರ ಮಹತ್ವವಿದೆ. ನಿಸರ್ಗದತ್ತವಾದ ಆರೋಗ್ಯ ರಕ್ಷಣೆಯ ಈ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಸುವರ್ಣ ಕ್ಲಿನಿಕ್‌ನ ಕಾರ್ಯ ಶ್ಲಾಘನೀಯ” ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಅವರು ಸಂಸ್ಥೆಯ ಈ ಜನಪರ ಆಚರಣೆಗೆ ಪೂರ್ಣ ಯಶಸ್ಸು ಕೋರಿ, ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಮುಖರಾದ ಗುಲಾಬಿ ಸುವರ್ಣ, ಹರಿಪ್ರಸಾದ್ ಚಾಲಿಯಾನ್, ಯಶವಂತ ಅಮೀನ್, ಸರಿತಾ ಹಾಗೂ ರವಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಸುವರ್ಣ ಕ್ಲಿನಿಕ್‌ನ ಮುಖ್ಯಸ್ಥರಾದ ಡಾ. ಹರಿಪ್ರಸಾದ್ ಸುವರ್ಣ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ಹಾಗೂ ಕಷಾಯ ಸ್ವೀಕರಿಸಲು ಬಂದಿದ್ದ ಸಾರ್ವಜನಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.
