canaratvnews

ಕಯ್ಯಾರು ಹಳೆ ಚರ್ಚ್‌ ಕೆಡವಿದ್ದು ನಮಗೆ ನೋವುಂಟು ಮಾಡಿದೆ: ವಿಲ್ಸನ್ ಕಯ್ಯಾರ್‌

ಮಂಗಳೂರು: ಕಾಸರಗೋಡಿನ ಕಯ್ಯಾರು ಗ್ರಾಮದಲ್ಲಿರುವ 73 ವರ್ಷ ಹಳೆಯದಾದ ಕ್ರಿಸ್ತರಾಜ ದೇವಾಲಯವು  ಕೆಡವಿದ್ದು ನೋವುಂಟು ಮಾಡಿದೆ ಎಂದು ವಿಲ್ಸನ್ ಕಯ್ಯಾರ್‌ ಆರೋಪಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1953ರಲ್ಲಿ ಫಾ. ಲಾರೆನ್ಸ್ ಎಸ್. ಪಾಯ್ಸ್ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿತ್ತು. 1956ರ ಏಪ್ರಿಲ್ 25ರಂದು ಮಂಗಳೂರು ಧರ್ಮಪ್ರಾಂತ್ಯದ ಆಗಿನ ಬಿಷಪ್ ಅ.ವಂ. ಬೇಸಿಲ್ ಎಫ್. ಡಿ’ಸೋಜಾ ಅವರಿಂದ ಉದ್ಘಾಟಿಸಲ್ಪಟ್ಟಿತ್ತು.

 

ಕಯ್ಯಾರ್ ಹಳೆ ಚರ್ಚ್ ಕೆಡವಲು ಚರ್ಚ್ ಮಹಾಸಭೆಯಲ್ಲೇ ಒಪ್ಪಿಗೆ: ಆಡಳಿತ ಮಂಡಳಿ ಸ್ಪಷ್ಟನೆ

 

 

 

ಪ್ರಸ್ತುತ ಪಾದ್ರಿಯಾಗಿರುವ ವಿಶಾಲ್ ಮೋನಿಸ್ ಅವರ ನೇತೃತ್ವದಲ್ಲಿ ಹೊಸ ಚರ್ಚಿನ ಕಟ್ಟಡ ನಿರ್ಮಾಣ ಕಾರ್ಯ ನಿಗದಿತ ಬೇರೆಯೇ ಸ್ಥಳದಲ್ಲಿ ಪ್ರಗತಿಯಲ್ಲಿದ್ದು, ಹೊಸ ಕಟ್ಟಡಕ್ಕೆ ಯಾವುದೇ ರೀತಿಯ ತೊಡಕು ಹಳೆಯ ಕಟ್ಟಡದಿಂದ ಇರಲಿಲ್ಲ.
ಆದರೆ ಹಳೆಯ ಚರ್ಚನ್ನು ಧ್ವಂಸಗೊಳಿಸುವ ಸಮಿತಿಯ ಅವೈಜ್ಞಾನಿಕ ಸ್ವಾರ್ಥಭರಿತ ನಿರ್ಧಾರ ಅನೇಕ ಮಂದಿಗೆ ಆಳವಾದ ನೋವನ್ನುಂಟುಮಾಡಿತು.
ಸಂಕಷ್ಟದ ಕಾಲದಲ್ಲಿ ನಮ್ಮ ಹಿರಿಯರ ಬೆವರು ಮತ್ತು ಹೋರಾಟದಿಂದ ನಿರ್ಮಿಸಲ್ಪಟ್ಟ ಈ ಸುಂದರ ಕಟ್ಟಡ ಭವಿಷ್ಯದ ಪೀಳಿಗೆಗಳಿಗೆ ಸ್ಮಾರಕವಾಗಿ ನಿಲ್ಲಬೇಕಿತ್ತು. ನಮ್ಮ ಊರಿನ ಸೌಂದರ್ಯವನ್ನು ಜಗತ್ತಿಗೆ ತೋರಿಸಬಲ್ಲ ರೋಮನ್-ಗೋಥಿಕ್ ಶೈಲಿಯ ಕಲಾತ್ಮಕ ಸಾಕ್ಷಿಯಾಗಿ ಉಳಿಯಬೇಕು ಎನ್ನುವ ಬೇಡಿಕೆಗಳಿಗೆ ಕಿಂಚಿತ್ತೂ ಗೌರವ ಕೊಡದೆ ಪಾದ್ರಿ ಹಾಗೂ ಸಮಿತಿಯ ವಿವೇಚನೆಯಿಲ್ಲದ ಕೃತ್ಯಕ್ಕೆ ಇಂದು ದಶಕಗಳಿಂದ ಇದ್ದಂತಹ ಅದ್ಭುತ ವಾಸ್ತುಶೈಲಿಯ ಕಲಾತ್ಮಕ ಮಂದಿರವೊಂದು ಧರೆಗುರುಳಿಸಲಾಗಿದೆ.
ಈ ಕಟ್ಟಡವನ್ನು ಸಂರಕ್ಷಿಸಲು ನಾವು ಮಂಗಳೂರು ಧರ್ಮಪ್ರಾಂತ್ಯಕ್ಕೆ ಮನವಿ ಸಲ್ಲಿಸಿದ್ದೆವು. ನಮ್ಮ ಬೇಡಿಕೆಗಳಿಗೆ ಇಂದು ಬೆಲೆಕೊಡದೆ ಚರ್ಚ್ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಶಿಥಿಲಾವಸ್ಥೆಯಲ್ಲಿದ್ದ ಹಳೇ ದೇವಾಲಯ

ಈ ಕಟ್ಟಡವು ಗ್ರಾಮದ ಇತಿಹಾಸದ ಸಾಕ್ಷಿಯಾಗಿತ್ತು. ಇದರ ರೋಮನ್ ಗೋಥಿಕ್ ಸಾಂಪ್ರದಾಯಿಕ ಹಾಗೂ ಕಲಾತ್ಮಕ ವಾಸ್ತುಶಿಲ್ಪವು ಭವಿಷ್ಯದ ವಿದ್ಯಾರ್ಥಿಗಳು, ಇತಿಹಾಸಕಾರರು, ಅರ್ಥಶಾಸ್ತ್ರಜ್ಞರು ಮತ್ತು ಸಂಶೋಧಕರಿಗೆ ಸ್ಥಳೀಯ ಇತಿಹಾಸ ಮತ್ತು ಪರಂಪರೆಯನ್ನು ಅಧ್ಯಯನ ಮಾಡಲು ಪ್ರೇರಣೆ ನೀಡುತ್ತಿತ್ತು. ಆದರೆ ಬಿಷಪ್, ಪಾದ್ರಿ ಮತ್ತು ಸಮಿತಿಯ ನಿರ್ಧಾರವು ಇಂದು ಎಲ್ಲವನ್ನೂ ಧರಾಶಾಯಿಯಾಗಿಸಿದೆ.
ಚರ್ಚ್ ಕಟ್ಟಡವು ಉರುಳಿಸಿದ ರೀತಿಯೂ ನಮಗೆ ತೀವ್ರ ಅಸಮಾಧಾನವಿದೆ. ಎಲ್ಲವನ್ನೂ ಹಾಳುಗೆಡವುವಂತೆ ಯಂತ್ರಗಳಿಂದ ಧೂಳೀಪಟಗೊಳಿಸಲಾಗಿದೆ. ಶಿಲುಬೆ ಕ್ರೈಸ್ತರ ಬಹು ಮುಖ್ಯ ಪವಿತ್ರ ಧಾರ್ಮಿಕ ಗುರುತಾಗಿದ್ದು ಅದಕ್ಕೆ ಕನಿಷ್ಠ ಗೌರವವನ್ನೂ ಕೊಡದೆ ಉರುಳಿಸಿದ ಪರಿಯು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಆಡಳಿತ ಸಮಿತಿ ಉತ್ತರಿಸಬೇಕಾಗಿದೆ.

ಕಟ್ಟಡ ಹೊಡೆದುರುಳಿಸಿದ ಬಗ್ಗೆ ಬಿಷಪ್ ಹಾಗೂ ಚರ್ಚ್ ಸಮಿತಿಯವರು ಉತ್ತರಿಸಬೇಕಾಗಿದೆ. ಸರಿಯಾದ ಆಧಾರಗಳಿಲ್ಲದೆ ರಾತ್ರಿ ಹೊತ್ತಿನಲ್ಲಿ ಬೀಳಿಸುವ ಅಗತ್ಯವೇನಿತ್ತು? ವೀಡಿಯೋ ಮಾಡಲು ಹೋದ ಯುವಕರಿಗೆ ಪೋಲೀಸರಿಗೆ ದೂರು ಕೊಡುವ ಬೆದರಿಕೆ, ಕೇಸ್ ಮಾಡಿ 8/10 ವರ್ಷಗಳ ಜೈಲಿನ ಬೆದರಿಕೆ, ಮದುವೆಗೆ ಆಧಾರಗಳನ್ನು ತಪ್ಪಿಸಿ ಅಡ್ಡಿಪಡಿಸುವ ಬೆದರಿಕೆಯನ್ನೊಡ್ಡುವ ಪಾದ್ರಿಯ ‘ಗೂಂಡಾ’ ವರ್ತನೆಗೆ ಉತ್ತರ ನೀಡಬೇಕಾಗಿದೆ. ಆದಷ್ಟು ಬೇಗ ಯುವಕರ ಪಾಲಿಗೆ ಕಂಟಕವಾಗಿರುವ ಪಾದ್ರಿಯನ್ನು ಕಯ್ಯಾರಿನಿಂದ ವರ್ಗಾವಣೆ ಮಾಡಬೇಕೆಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.

ಹಳೆ ಇಗರ್ಜಿ ಕಟ್ಟಡ ಮುರಿದುದರಿಂದ ಹಲವಾರು ಹಿರಿಯರಿಗೆ, ಯುವಕರಿಗೆ, ಗ್ರಾಮಕ್ಕೆ, ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇದಕ್ಕೆ ಕಾರಣ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಸಲ್ಡಾನಾ, ಪಾದ್ರಿ ವಿಶಾಲ್ ಮೋನಿಸ್, ಪಾಲನಾ ಮಂಡಳಿ ಹಾಗೂ ಸಮಿತಿಗಳು ಕ್ರಿಸ್ತರಾಜರ ಹಳೆಯ ದೇವಾಲಯವನ್ನು ಉಳಿಸುವ ನಿಟ್ಟಿನಲ್ಲಿ ನಾವು ಹಲವಾರು ಪ್ರಯತ್ನಗಳನ್ನು ಮಾಡಿದ್ದೆವು.
ಮಂಗಳೂರಿನ ಬಿಷಪರ ನಿರ್ದೇಶನದಂತೆ ಬರವಣಿಗೆಯ ಮೂಲಕ ನಮ್ಮಿಂದಾದ ಆರ್ಥಿಕ ಹಾಗೂ ದೈಹಿಕ ಕೆಲಸಗಳನ್ನು ಮಾಡುತ್ತೇವೆ ಎಂದು ಬರವಣಿಗೆಯ ಮೂಲಕ ನಾವು ಹನ್ನೊಂದು ಜನ ಪಾವತಿಸಿದ್ದೆವು. ಸ್ವಂತ ಊರಿನಲ್ಲಿರುವ ಒಂದು ಸುಂದರವಾದ ವಾಸ್ತು ಕೃತಿಯನ್ನು ಉಳಿಸುವುದಕ್ಕೋಸ್ಕರ ಇಂತಹ ಮಹತ್ತರವಾದ ತೀರ್ಮಾನವನ್ನು ಕೈಗೊಂಡಿದ್ದರೂ ಇದಕ್ಕೆ ಕವಡೆ ಕಾಸಿನ ಬೆಲೆಯನ್ನೂ ತರಲಿಲ್ಲ.
ಹಳೆಯ ಕಟ್ಟಡದ ಸ್ಥಿರತೆ ಪ್ರಮಾಣೀಕರಿಸಲು NITK ಸುರತ್ಕಲ್ ಇವರಿಂದ ಸಂಪೂರ್ಣ ಮಾಹಿತಿಯನ್ನಾಧರಿಸಿ ಸುಮಾರು 27,000 ರೂ. ವೆಚ್ಚ ಭರಿಸಿ ಪ್ರಮಾಣ ಪತ್ರ ತಯಾರಿಸಿ ಕಳುಹಿಸಲಾಗಿತ್ತು. ಇದೂ ಮೂಲೆಗುಂಪು ಮಾಡಿದರು.
ಈ ಮೂಲಕ ನಾವು ಪ್ರಯತ್ನಿಸಿದರೂ ಇಂದು ನಾವು ವ್ಯವಸ್ಥೆಯೆದುರು ಸೋತಿದ್ದೇವೆ. ನಮ್ಮ ಈ ಸೋಲು ಒಂದು ಮಹಾನ್ ಕಲಾಕೃತಿಯ ನಾಶಕ್ಕೆ ಕಾರಣವಾಗಿದೆ. ಇಂತಹ ಪುರಾತನ ಕಟ್ಟಡಗಳು ಉಳಿಯಬೇಕಾಗಿವೆ. ಉಳಿಸುವ ಕರ್ತವ್ಯ ನಮ್ಮೆಲ್ಲರದಾಗಿದೆ. ಪುರಾತತ್ವ ಉಳಿಸಲು ನಾವು ದೃಢ ಸಂಕಲ್ಪದಿಂದ ಧ್ವನಿ ಎತ್ತಬೇಕಾಗಿದೆ. ಇದು ನಮ್ಮ ಸಂಪತ್ತು, ನಮ್ಮ ನೆಲದ ಸಂಪತ್ತು, ನಮ್ಮ ರಾಜ್ಯದ ಮತ್ತು ನಮ್ಮ ದೇಶದ ಸಂಪತ್ತು. ನಮ್ಮ ಈ ಹೋರಾಟ ಮುಂದಿನ ನಮ್ಮ ಯುವ ಜನರಿಗೆ ಪುರಾತತ್ವದ ಬಗೆಗಿನ ಕಾಳಜಿ ಮತ್ತು ಅದರ ಮಹತ್ವದ ಬಗ್ಗೆ ಕಿಂಚಿತ್ತಾದರೂ ಅರಿವು ಮೂಡಿಸಲು ಪ್ರೇರಣೆಯಾದರೆ ಅದುವೇ ನಮ್ಮ ಹೋರಾಟಕ್ಕೆ ಸಿಕ್ಕಂತಹ ಪ್ರತಿಫಲ ಎಂದು ಆಶಿಸುತ್ತೇವೆ.
ನಾವು ಈ ಮೂಲಕ ಎತ್ತಿದ ಪ್ರಶ್ನೆಗಳಿಗೆ ಇಂದು ಧಾರ್ಮಿಕ ಮುಖಂಡರಾದ ಮಂಗಳೂರಿನ ಬಿಷಪ್ ರವರು ಉತ್ತರ ನೀಡಬೇಕು. ಇಲ್ಲವಾದಲ್ಲಿ ಬಿಷಪ್ ನಿವಾಸದ ಎದುರು ಹೋರಾಟ ನಡೆಸಲಾಗುವುದು ಎಂದು ಈ ಮೂಲಕ ತಿಳಿಸ ಬಯಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಲ್ಸನ್ ಜೆ.ಪಿ. ಡಿಸೋಜಾ, ಜಾನ್ ಡಿಸೋಜಾ, ಅನೀಶ್ ಸುವಾರಿಸ್, ಆನ್ಸ್ಟನ್ ಸುವಾರಿಸ್, ಆಸ್ವಾಲ್ಡ್ ಡಿಸೋಜಾ, ಪ್ರಕಾಶ್ ನೊರೊನ್ಹಾ ಹಾಜರಿದ್ದರು.

Share News
Exit mobile version