LATEST NEWS

ಓಣಂ ಹಬ್ಬ ಸಮಾಜವನ್ನು ಒಗ್ಗೂಡಿಸುವ ಕುಟುಂಬದ ಹಬ್ಬ- ಐವನ್ ಡಿ’ಸೋಜಾ*

ಮಂಗಳೂರು: ಓಣಂ ಹಬ್ಬವು ಕೇವಲ ಕೇರಳಕ್ಕೆ ಸೀಮಿತವಾಗಿರದೆ, ದೇಶದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ಕೇರಳೀಯರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಬ್ಬವು ಸಮಾಜವನ್ನು ಒಗ್ಗೂಡಿಸುವ ಹಾಗೂ ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುವ ಮಹತ್ವದ ಹಬ್ಬವಾಗಿ ಪರಿವರ್ತನೆಯಾಗಿದೆ” ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಅವರು ಹೇಳಿದರು.

ಅಡ್ಯಾರ್‌ನ ಸೈಂಟ್ ಲೂರ್ಡ್ಸ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ನಡೆದ “ತೈತಕ-2026” ಓಣಂ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಓಣಂ ಹಬ್ಬದ ಪ್ರಮುಖ ಉದ್ದೇಶಗಳಲ್ಲಿ ರೈತರನ್ನು ಗೌರವಿಸುವುದು, ಕುಟುಂಬದ ಸದಸ್ಯರು ಹಾಗೂ ಸಮಾಜದ ವಿವಿಧ ವರ್ಗಗಳ ಜನರು ಒಗ್ಗೂಡಿ ಸಂಭ್ರಮಿಸುವುದು ಪ್ರಮುಖವಾಗಿದೆ. ಈ ಹಬ್ಬದ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆ ಹಾಗೂ ಸಾಮಾಜಿಕ ಸೌಹಾರ್ದತೆಯ ಮಹತ್ವವನ್ನು ಅರಿತು ಕೊಳ್ಳಲು ಸಾಧ್ಯವಾಗುತ್ತದೆ. ಈ ಆಶಯಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವತ್ತ ಮುನ್ನಡೆಯ ಬೇಕು” ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸೈಂಟ್ ಲೂರ್ಡ್ಸ್ ಕಾಲೇಜ್ ಆಫ್ ನರ್ಸಿಂಗ್‌ನ ಆಡಳಿತಾಧಿಕಾರಿ ಮಾರ್ಷಲ್ ಮೊಂಟೇರಿಯೊ ಅವರು ಮಾತನಾಡಿ, ಓಣಂ ಹಬ್ಬದ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗಗಳಲ್ಲಿಯೂ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆ ಮತ್ತಷ್ಟು ವೃದ್ಧಿಯಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಅಭಿಜಿತ್ ಹಾಗೂ ಮ್ಯಾನೇಜರ್ ಹಬೀಬುಲ್ಲಾ ಕಣ್ಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರುಗಿದವು ಹಾಗೂ ಓಣಂ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಸಹಭೋಜನವನ್ನೂ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿ ಕ್ರಿಸ್ನಿ ಡಿ’ಸಿಲ್ವಾ ಸ್ವಾಗತ ಕೋರಿದರು. ವಿದ್ಯಾರ್ಥಿನಿ ಪ್ರಿಜಿತಾ ಡಿ’ಸೋಜಾ ವಂದನಾರ್ಪಣೆ ನೆರವೇರಿಸಿದರು.

Share News