ವಿಟ್ಲ ,ಪೆರುವಾಯಿ: ಜೂನ್.17:ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಮೂಲಕ ಹಾದುಹೋಗುವ ಅಂತಾರಾಜ್ಯ ಮುಖ್ಯ ರಸ್ತೆಯ ಸೇತುವೆಯ ಬಳಿ ಹತ್ತು ದಿನಗಳ ಅಂತರದಲ್ಲಿ ಎರಡು ವಾಹನಗಳು ನದಿಗೆ ಬಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಈ ಸರಣಿ ಅಪಘಾತಗಳ ಬಳಿಕ ಎಚ್ಚೆತ್ತುಕೊಂಡಿರುವ ಪೆರುವಾಯಿ ಪಂಚಾಯತ್, ಇದೀಗ ಅಪಾಯಕಾರಿ ತಿರುವಿನಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ಪಿಕಪ್ ವಾಹನವೊಂದು ಇಲ್ಲಿ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಹಾನಿಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ಭಾನುವಾರ ರಾತ್ರಿ ಐವರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿತ್ತು. ಸದ್ಯ ನದಿಯಲ್ಲಿ ಮಳೆ ಇಲ್ಲದ ಕಾರಣ ನೀರಿರಲಿಲ್ಲ. ಹೀಗಾಗಿ ಕಾರಿನಲ್ಲಿದ್ದ ಐವರೂ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶ್ಯವಾಗಿ ಪಾರಾಗಿದ್ದರು.

ಈ ರಸ್ತೆಯು ತೀರಾ ಕಿರಿದಾಗಿದ್ದು, ಸೇತುವೆಯು ತುಂಬಾ ತಗ್ಗಿನಲ್ಲಿದೆ. ಇದರ ಜೊತೆಗೆ ರಸ್ತೆಯ ಇಳಿಜಾರು ಹಾಗೂ ಏಕಾಏಕಿ ಬರುವ ಎಲ್ (L) ಆಕಾರದ ಅಪಾಯಕಾರಿ ತಿರುವು ಇರುವುದರಿಂದ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಇಲ್ಲಿ ಯಾವುದೇ ಸುರಕ್ಷತಾ ಗೋಡೆ ಇಲ್ಲದ ಕಾರಣ ಸವಾರರು ಜೀವಭಯದಲ್ಲೇ ಸಂಚರಿಸುತ್ತಿದ್ದರು

ಸರಣಿ ಅಪಘಾತಗಳ ಬಳಿಕ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪಂಚಾಯತ್ ತುರ್ತಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುತ್ತಿದೆ.

ಅಧಿಕಾರಿಗಳಿಂದ ತುರ್ತು ಕ್ರಮದ ಬಗ್ಗೆ ಮಾಹಿತಿ : ಸದ್ಯ ಸಾರ್ವಜನಿಕರ ಪ್ರಾಣ ರಕ್ಷಣೆ ಮುಖ್ಯವಾಗಿ ರುವುದರಿಂದ ಪಂಚಾಯತ್ ವತಿಯಿಂದ ತಕ್ಷಣವೇ ಸ್ಪಂದಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಎಚ್ಚರಿಕೆ ಫಲಕಗಳು: ವಾಹನ ಸವಾರರಿಗೆ ದೂರದಿಂದಲೇ ತಿರುವು ಕಾಣುವಂತೆ ಮಾಡಲು ಶೀಘ್ರದಲ್ಲೇ ಸೂಚನಾ ಫಲಕಗಳು ಮತ್ತು ರಿಫ್ಲೆಕ್ಟರ್‌ಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದ್ದಾರೆ.

ಶಾಶ್ವತ ಪರಿಹಾರಕ್ಕೆ ಪ್ರಸ್ತಾವನೆ: ಇದು ಅಂತಾರಾಜ್ಯ ಮುಖ್ಯ ರಸ್ತೆಯಾಗಿರುವುದರಿಂದ, ಇಲ್ಲಿ ದೊಡ್ಡ ಮಟ್ಟದ ಶಾಶ್ವತ ತಡೆಗೋಡೆ (Crash Barrier) ಮತ್ತು ರಸ್ತೆ ವಿಸ್ತರಣೆ ಮಾಡಲು ಲೋಕೋಪಯೋಗಿ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







