ಮಂಗಳೂರು: ಕೊಡಿಯಾಲ್‌ಬೈಲ್‌ನ ಸಂತ ಅಲೋಶಿಯಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ಜುಲೈ 31 ರಂದು ಸಂಸ್ಥೆಯ ಸ್ಥಾಪಕರಾದ ಸಂತ ಇಗ್ನೇಶಿಯಸ್ ಲೊಯೋಲಾ ರವರ ಸ್ಮರಣಾರ್ಥ ‘ಸ್ಥಾಪಕರ ದಿನ’ವನ್ನು ಅತ್ಯಂತ ಸಡಗರ- ಸಂಭ್ರಮ ದಿಂದ ಆಚರಿಸಲಾಯಿತು.

ಶಾಲಾ ಕೊಯರ್ ತಂಡದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, 1974ನೇ ಶೈಕ್ಷಣಿಕ ಸಾಲಿನ ಹಳೆಯ ವಿದ್ಯಾರ್ಥಿಗಳಾದ ಶ್ರೀ ಎಡ್ವರ್ಡ್ ಮಚಾದೊ ಮತ್ತು ಸಂಗಡಿಗರು ಉಪಸ್ಥಿತರಿದ್ದು, ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದಾರ ಮನಸ್ಸಿನಿಂದ ವಿದ್ಯಾರ್ಥಿವೇತನವನ್ನು ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ಜಾನ್ಸನ್ ಪಿಂಟೊ ಅವರು ಹಬ್ಬದ ಸಂದೇಶ ನೀಡಿ, “ಯೇಸುಸಭೆಯ ಸ್ಥಾಪಕರು ತಮ್ಮ ಬದುಕನ್ನು ದೃಢಸಂಕಲ್ಪ ಹಾಗೂ ಸ್ವಯಂ ಮೌಲ್ಯಮಾಪನದ ಮೂಲಕ ರೂಪಿಸಿಕೊಂಡಂತೆ, ನಾವೆಲ್ಲರೂ ನಮ್ಮ ಜೀವನವನ್ನು ಉತ್ತಮ ಹಾದಿಯಲ್ಲಿ ರೂಪಿಸಲು ಶ್ರಮಿಸಬೇಕು” ಎಂದರು. ಇದೇ ವೇಳೆ ಅವರು ಶಾಲೆಯ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿವೇತನ ನೀಡಿದ 1974ರ ಸಾಲಿನ ಹಳೆಯ ವಿದ್ಯಾರ್ಥಿಗಳ ಉದಾರತೆಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಉಪಮುಖ್ಯೋಪಾಧ್ಯಾಯರಾದ ಶ್ರೀ ಲ್ಯಾನ್ಸಿ ಡಿ’ಸೋಜ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಆಶಿಕಾ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಶಾಲೆಯ ಡಾನ್ಸ್ ಕ್ಲಬ್ ಮತ್ತು ಡ್ರಾಮಾ ಕ್ಲಬ್ ಸದಸ್ಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಶಾಲಾ ಬ್ಯಾಂಡ್ ಕ್ಲಬ್ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು.

ಶಿಕ್ಷಕಿ ಶ್ರೀಮತಿ ಲವೀನಾ ಮೊಂತೆರೋ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಸಂಘಟಿಸಿದ್ದರು. ಕಲಾ ಶಿಕ್ಷಕರಾದ ಶ್ರೀ ಜಾನ್ ಚಂದ್ರನ್, ಶಿಕ್ಷಕಿಯರಾದ ಶ್ರೀಮತಿ ರೆನ್ನಿ ವಾಸ್, ಶ್ರೀಮತಿ ಸೋನಲ್ ಲೋಬೊ, ಶ್ರೀಮತಿ ಡಯಾನ ಲೋಬೊ, ಶ್ರೀಮತಿ ಡಯನಾ ಗೋವಿಯಸ್, ಶ್ರೀಮತಿ ಶಲ್ಮಾ ಸಲ್ದಾನಾ, ಶ್ರೀಮತಿ ಕ್ರಿಸ್ ಡಿಸೋಜ, ಶ್ರೀಮತಿ ಭಾರತಿ ಎನ್. ಕೆ., ಶಿಕ್ಷಕರಾದ ಶ್ರೀ ಪ್ರವೀಣ್ ಮೊಂತೇರೊ, ಶ್ರೀ ಪ್ರವೀಣ್ ಕುಟಿನ್ಹಾ ಹಾಗೂ ಕಛೇರಿ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಕರಿಸಿದರು.

ಕುಮಾರಿ ಲೆನೊರಾ ಸ್ವಾಗತಿಸಿ ವಂದಿಸಿದರು. ಜೋಶ್ವ ಡಿಸೋಜ ಹಾಗೂ ಮೆಲಿನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಮುಕ್ತಾಯಗೊಂಡಿತು.

















