ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಮಾರಧಾರಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಏರಿಕೆಯಾಗಿದೆ. ಇದರಿಂದಾಗಿ ದೇವಸ್ಥಾನದ ಪವಿತ್ರ ಸ್ನಾನಘಟ್ಟವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.
ನದಿಯಲ್ಲಿ ನೀರಿನ ಹರಿವು ತೀವ್ರವಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಭಕ್ತರು ನದಿಯ ದಂಡೆಗೆ ಅಥವಾ ನೀರಿನತ್ತ ತೆರಳದಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ನದಿಯ ತೀರದಲ್ಲಿ ಪೊಲೀಸರು ಹಾಗೂ ಇಲಾಖಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರ ಚಲನವಲನದ ಮೇಲೆ ಕಠಿಣ ನಿಗಾ ವಹಿಸಲಾಗಿದೆ.
ಭಕ್ತರಿಗೆ ಪರ್ಯಾಯ ವ್ಯವಸ್ಥೆ:ಸ್ನಾನಘಟ್ಟ ಬಳಕೆಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ, ದೂರದ ಊರುಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿಯು ತಕ್ಷಣದ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ. ಸ್ನಾನಘಟ್ಟದ ಸಮೀಪದಲ್ಲೇ ದೊಡ್ಡ ಡ್ರಮ್‌ಗಳಲ್ಲಿ ನೀರು ತುಂಬಿಸಿ ಭಕ್ತರಿಗೆ ಪವಿತ್ರ ಸ್ನಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ತಾತ್ಕಾಲಿಕ ವ್ಯವಸ್ಥೆಯಿಂದಾಗಿ ಪ್ರತಿದಿನ ಆಗಮಿಸುವ ಸಾವಿರಾರು ಭಕ್ತರು ಯಾವುದೇ ಅಡಚಣೆಯಿಲ್ಲದೆ ಧಾರ್ಮಿಕ ವಿಧಿವಿಧಾನ ಪೂರೈಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಪ್ರಸ್ತುತ ಮಳೆ ಮುಂದುವರಿದಿರುವುದರಿಂದ ಕುಮಾರಧಾರಾ ನದಿಯ ನೀರಿನ ಮಟ್ಟದ ಮೇಲೆ ಅಧಿಕಾರಿಗಳು ನಿರಂತರ ನಿಗಾ ಇರಿಸಿದ್ದಾರೆ. ನದಿಯ ಪ್ರವಾಹ ಪರಿಸ್ಥಿತಿ ತಗ್ಗಿ, ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಗೆ ಬರುವವರೆಗೂ ಭಕ್ತರಿಗಾಗಿ ಈ ಪರ್ಯಾಯ ಸ್ನಾನದ ವ್ಯವಸ್ಥೆಯು ಮುಂದುವರಿಯಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.



