ಮಂಗಳೂರು:ನಗರದ ಹೃದಯಭಾಗದಲ್ಲಿರುವ ಬೆಂದೂರ್ ಸೇಂಟ್ ಆಗ್ನೆಸ್ ಶಾಲಾ-ಕಾಲೇಜು ಸಮೀಪದ ಬಸ್ ತಂಗುದಾಣವು ಪ್ರಸ್ತುತ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಅಪಾಯಕಾರಿಯಾಗಿ ಮಾರ್ಪಟ್ಟಿದ್ದು, ಮಂಗಳೂರು ಮಹಾನಗರ ಪಾಲಿಕೆಯ ತೀವ್ರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಕೆಲವು ದಿನಗಳ ಹಿಂದೆ ಸಂಭವಿಸಿದ ಮರ ಬಿದ್ದ ಘಟನೆಯಿಂದಾಗಿ ಈ ಸುಸಜ್ಜಿತ ಬಸ್ ತಂಗುದಾಣದ ಗ್ಲಾಸ್‌ಗಳು ಒಡೆದು ಚೂರುಚೂರಾಗಿವೆ. ಆದರೆ, ಘಟನೆ ನಡೆದು ಹಲವು ದಿನಗಳು ಕಳೆದರೂ ಒಡೆದ ಗ್ಲಾಸ್ ಚೂರುಗಳನ್ನು ಸ್ಥಳದಿಂದ ತೆರವುಗೊಳಿಸದೆ ಹಾಗೆಯೇ ಬಿಡಲಾಗಿದೆ. ಬಸ್ ತಂಗುದಾಣದ ಆಸನಗಳು ಹಾಗೂ ನೆಲದಾದ್ಯಂತ ಈ ಗ್ಲಾಸ್ ಚೂರುಗಳು ಹರಡಿಕೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ಆತಂಕ ಸೃಷ್ಟಿಸಿದೆ.
ಹೆಸರು ‘ಸ್ವಚ್ಛ ಭಾರತ್’– ವಾಸ್ತವದಲ್ಲಿ ನರಕ:
ವಿಪರ್ಯಾಸವೆಂದರೆ, ಈ ಬಸ್ ತಂಗುದಾಣಕ್ಕೆ ‘ಸ್ವಚ್ಛ ಭಾರತ್ ಬಸ್ ತಂಗುದಾಣ’ ಎಂದು ದೊಡ್ಡದಾಗಿ ಹೆಸರಿಸಲಾಗಿದೆ. ಆದರೆ ನಗರದ ಪ್ರಮುಖ ರಸ್ತೆಯಲ್ಲೇ ಇರುವ ಈ ತಂಗುದಾಣದ ದುಸ್ಥಿತಿ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನ ಹೃದಯಭಾಗದಲ್ಲೇ ಇಂತಹ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.
ಮಹಾನಗರ ಪಾಲಿಕೆಯು ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನ ತಕ್ಷಣವೇ ಎಚ್ಚೆತ್ತುಕೊಂಡು, ಈ ಗ್ಲಾಸ್ ಚೂರುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತಂಗುದಾಣವನ್ನು ಸಾರ್ವಜನಿಕರ ಸುರಕ್ಷಿತ ಬಳಕೆಗೆ ಯೋಗ್ಯವಾಗಿಸಬೇಕು ಎಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.