ಮಂಗಳೂರು, ನ. 25: ಸಮಾಜದ ಎಲ್ಲಾ ಸಮುದಾಯದ ಜನರನ್ನು ಜಾತಿ, ಮತ, ಧರ್ಮದ ಭೇದವಿಲ್ಲದೆ ಮಾಧ್ಯಮದ ಮೂಲಕ ಒಟ್ಟು ಸೇರಿಸಿ, ಕಳೆದ 14 ವರ್ಷಗಳಿಂದ ‘ಎಂ.ಪಿ, ಎಂ.ಎಲ್.ಎ’ ನ್ಯೂಸ್ ಪತ್ರಿಕೆ ಮತ್ತು ವೆಬ್ ಜಾಲದ ಮೂಲಕ ಡಾ. ಅಶೋಕ್ ಶೆಟ್ಟಿ ಬಿ.ಎನ್. ಅವರು ‘ಸೌಹಾರ್ದ ಸಂಗಮ’ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ‘ಎಂ.ಪಿ, ಎಂ.ಎಲ್.ಎ’ ಪತ್ರಿಕೆ ಮತ್ತು ನ್ಯೂಸ್ ವೆಬ್ ಮೀಡಿಯಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 14ನೇ ವರ್ಷದ ‘ಸೌಹಾರ್ದ ಸಂಗಮ’ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗಣ್ಯರ ನುಡಿಗಳು:
• ಡಾ. ಹರಿಕೃಷ್ಣ ಪುನರೂರು (ಮಾಜಿ ರಾಜ್ಯಾಧ್ಯಕ್ಷರು, ಕಸಾಪ): ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಇರಬೇಕು’ ಎಂಬ ಮಾತಿನಂತೆ ಸಮಾಜ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುತ್ತಿರುವ ಅಶೋಕ್ ಶೆಟ್ಟಿಯವರ ಪ್ರಯತ್ನ ಮೆಚ್ಚುವಂತಹದ್ದು” ಎಂದರು.

• ಡಾ. ಅಗರಿ ನವೀನ್ ಭಂಡಾರಿ (ಮಾಜಿ ನಿರ್ದೇಶಕರು, ಆರ್ಬಿಐ ಉತ್ತರ ವಲಯ): “ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಗೌರವಿಸಿರುವುದು ಅತ್ಯಂತ ಖುಷಿ ನೀಡಿದೆ” ಎಂದು ಅಭಿಪ್ರಾಯಪಟ್ಟರು.
ಮಂಗಳೂರಿನ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ:
• ಸಮಾಜ ರತ್ನ ಪುರಸ್ಕಾರ:
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ 30 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಿತರಿಸಿ ಸಮಾಜಮುಖಿ ಕಾರ್ಯಗಳನ್ನು ನಡೆಸಿದ ಐಕಳ ಹರೀಶ್ ಶೆಟ್ಟಿ ಅವರಿಗೆ ಅವರ ಧರ್ಮಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿ ಅವರ ಸಮ್ಮುಖದಲ್ಲಿ ‘ಸಮಾಜ ರತ್ನ ಪುರಸ್ಕಾರ’ ನೀಡಿ ಗೌರವಿಸಲಾಯಿತು.

• ಬೆಸ್ಟ್ ಡಾಕ್ಟರ್ಸ್ ಅವಾರ್ಡ್:
ಮಂಗಳೂರು ಕೆಎಂಸಿ ಆಸ್ಪತ್ರೆಯ ಅಡಿಷನಲ್ ಪ್ರೊಫೆಸರ್, ಸ್ತ್ರೀ ರೋಗ, ಹೆರಿಗೆ ತಜ್ಞೆ ಹಾಗೂ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ. ನೀನಾ ಎ. ಮಹಾಲೆ ಅವರಿಗೆ, ಅವರ ಪತಿ ಹಾಗೂ ಕೆಎಂಸಿ ರೇಡಿಯಾಲಜಿ ಪ್ರೊಫೆಸರ್ ಡಾ. ಅಜಿತ್ ಮಹಾಲೆ ಅವರೊಂದಿಗೆ ‘ಬೆಸ್ಟ್ ಡಾಕ್ಟರ್ಸ್ ಅವಾರ್ಡ್’ ನೀಡಿ ಸನ್ಮಾನಿಸಲಾಯಿತು.

• ಬೆಸ್ಟ್ ಆಫೀಸರ್ ಅವಾರ್ಡ್:
ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರಿಗೆ ‘ಬೆಸ್ಟ್ ಆಫೀಸರ್ ಅವಾರ್ಡ್’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಸರ್ಕಾರಿ ಅಧಿಕಾರಿಯಾಗಿ ನಾನು ಮಾಡಿರುವ ಕೆಲಸವನ್ನು ಗುರುತಿಸಿ ಗೌರವಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.

ಸಮಾರಂಭದಲ್ಲಿ ನ್ಯಾಯವಾದಿ ರಾಮಪ್ರಸಾದ್ ಆರ್., ವೈದ್ಯರತ್ನ ಗಂಗಾಧರ ಪಂಡಿತ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್., ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷರಾದ ಆರೀಫ್ ಪಡುಬಿದ್ರೆ, ವಿಲ್ಫ್ರೆಡ್ ಡಿ’ಸೋಜ, ಕೋಶಾಧಿಕಾರಿ ವಿಜಯ ಕೋಟ್ಯಾನ್, ನಮ್ಮ ಟಿವಿ ಆಡಳಿತ ನಿರ್ದೇಶಕ ಡಾ. ಶಿವಚರಣ್ ಶೆಟ್ಟಿ, ಸುರೇಶ್ ಶೆಟ್ಟಿ ಕುರ್ಲಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಆಕಾಶವಾಣಿ ಕಲಾವಿದೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಧನ್ಯವಾದ ಸಮರ್ಪಿಸಿದರು. ಮಂಗಳೂರು ಪಾಂಡೇಶ್ವರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ ಎಂ. ಬೈಂದೂರು ಮತ್ತು ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯು ಕಾರ್ಯಕ್ರಮಕ್ಕೆ ಸಹಕಾರ ನೀಡಿತು.

ಸಾಂಸ್ಕೃತಿಕ ಕಾರ್ಯಕ್ರಮ:
ಸಭಾ ಕಾರ್ಯಕ್ರಮದ ಬಳಿಕ ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಲನಚಿತ್ರ ಗಾಯಕ ರವೀಂದ್ರ ಪ್ರಭು ಅವರ ‘ರಾಗ್ ರಂಗ್’ ತಂಡದಿಂದ ಸೌಹಾರ್ದ ಸಂಗೀತ ರಸಸಂಜೆ ನಡೆಯಿತು. ಬಳಿಕ ದ.ಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನರೇಶ್ ಸಸಿಹಿತ್ಲು ರಚನೆ ಮತ್ತು ನಿರ್ದೇಶನದಲ್ಲಿ ತ್ರಿನೇತ್ರ ಕಲಾವಿದರಿಂದ ‘ಬ್ರಹ್ಮ ರಕ್ಕಸೆ’ ತುಳು ನಾಟಕ ಪ್ರದರ್ಶನಗೊಂಡಿತು.





