ಮಂಗಳೂರು: ಎಂಆರ್‌ಪಿಎಲ್ (MRPL) ಹೋರಾಟ ಸಮಿತಿಯ ಪ್ರಮುಖರ ಪೂರ್ವಭಾವಿ ಸಭೆಯು ಬಜ್ಪೆಯ ಶ್ರೀ ನಾರಾಯಣ ಗುರು ಭವನದ ಸಭಾಂಗಣದಲ್ಲಿ ನಡೆಯಿತು. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಹೋರಾಟದ ಸ್ವರೂಪ ಮತ್ತು ಬೇಡಿಕೆಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸತ್ಯಜಿತ್ ಅವರು, “ನಮ್ಮ ನ್ಯಾಯಯುತ ಬೇಡಿಕೆಗಳನ್ನು ಜಿಲ್ಲಾ ಆಡಳಿತ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ಹೋರಾಟದ ಸ್ಪಷ್ಟ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು” ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಪ್ರಮುಖರಾದ ಪ್ರತಿಭಾ ಕುಳಾಯಿ ಅವರು, “ಎಂಆರ್‌ಪಿಎಲ್ ಸಂಸ್ಥೆಯು ಈ ಹಿಂದೆ ಸ್ಥಳೀಯರಿಗೆ ನೀಡಿದ ಭರವಸೆಗಳನ್ನು ಪಾಲಿಸದೆ ಜನರಿಗೆ ಅನ್ಯಾಯ ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, “ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಹೋರಾಟಗಳಲ್ಲಿ ತಾನು ಸಕ್ರಿಯವಾಗಿ ಭಾಗವಹಿಸುವುದಾಗಿ” ಅವರು ಭರವಸೆ ನೀಡಿದರು.
ಈ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಪ್ರಧಾನ ಸಂಚಾಲಕರಾದ ಶಶಿರಾಜ್ ಶೆಟ್ಟಿ ಕೊಳಂಬೆ, ಪ್ರಮುಖರಾದ ಪ್ರಸನ್ನ ರವಿ, ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಎಂ.ಎಸ್.ಇ.ಝಡ್ (MSEZ) ಗುತ್ತಿಗೆ ಕಾರ್ಮಿಕರ, ಭೂ ನಿರ್ವಸಿತರ ಮತ್ತು ಸಂತ್ರಸ್ತರ ಹೋರಾಟ ಸಮಿತಿಯ ವಿವಿಧ ಮುಖಂಡರು ಉಪಸ್ಥಿತರಿದ್ದರು.
