ಮಂಗಳೂರು: ನಿರ್ಗತಿಕರು, ದೀನದಲಿತರು ಹಾಗೂ ಸಮಾಜದ ಅಂಚಿನಲ್ಲಿರುವವರ ಸೇವೆಯಲ್ಲಿ ತೊಡಗಿರುವ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ (ರಿ.) ತನ್ನ 17ನೇ ವಾರ್ಷಿಕೋತ್ಸವವನ್ನು ಮಂಗಳವಾರ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿತು.

ಕೋಲ್ಕತ್ತಾದ ಸಂತ ಮದರ್ ತೇರೆಸಾ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವು ಧನ್ಯವಾದದ ಪವಿತ್ರ ಬಲಿಪೂಜೆಯೊಂದಿಗೆ ಆರಂಭಗೊಂಡಿತು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ ಪ್ರಧಾನ ಗುರುಗಳಾಗಿ ಬಲಿಪೂಜೆ ನೆರವೇರಿಸಿದರು.

ಫಾ. ಪೀಟರ್ ರೆಜಿನಾಲ್ಡ್ ಡಿ’ಸೋಜ, ಫಾ. ಫ್ರಾನ್ಸಿಸ್ ಕ್ರಾಸ್ತಾ, ಫಾ. ಜೋಕಿಮ್ ಮೊಂತೆರೊ, ಫಾ. ಸಿರಿಲ್ ಡಿ’ಸೋಜ, ಫಾ. ಚಾರ್ಲ್ಸ್ ಮೆನೆಜಸ್, ಫಾ. ಡೆನಿಸ್ ಸುವಾರಿಸ್, ಫಾ. ಜೋನ್ ಡಿ’ಸೋಜ ಹಾಗೂ ಫಾ. ಸೆಬಾಸ್ಟಿಯನ್ ಸಹಬಲಿಪೂಜೆಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕೊಂಕಣಿ ಭಾಷೆಯಲ್ಲಿ ರಚಿತವಾದ ಲೇಖಕ ಸ್ಟ್ಯಾನಿ ಬೇಳ ಅವರ ‘ಹೆಬ್ರೋನಾಂತ್ಲೆ ಮೊಗಾ ತುವಾಲೆ’ ಕೃತಿಯನ್ನು ಮೊನ್ಸಿಂಜ್ಞೋರ್ ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ ಬಿಡುಗಡೆ ಮಾಡಿದರು. ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ ಅವರ ಜೀವನ ಪಯಣ, ಆತ್ಮಕಥನ ಹಾಗೂ ಸ್ನೇಹಾಲಯ ಸಂಸ್ಥೆಯ ನಿರ್ಮಾಣಕ್ಕಾಗಿ ಅವರು ನಡೆಸಿದ ಹೋರಾಟವನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ.

2025-26ನೇ ಸಾಲಿನಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಸ್ನೇಹಾಲಯದ ಕ್ಲಿನಿಕಲ್ ವಿಭಾಗದ ಮುಖ್ಯಸ್ಥ ಕ್ಲಿಂಟ್ ಜೋಸೆಫ್ ಅವರಿಗೆ ‘ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ ಮಾತನಾಡಿ, ಕಳೆದ 17 ವರ್ಷಗಳ ಸೇವಾಯಾತ್ರೆಯಲ್ಲಿ ಸಂಸ್ಥೆಗೆ ಬೆಂಬಲ ನೀಡಿದ ದಾನಿಗಳು, ಹಿತೈಷಿಗಳು, ಸ್ನೇಹಿತರು ಹಾಗೂ ಶುಭಚಿಂತಕರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅನೇಕ ದಾನಿಗಳು, ಹಿತೈಷಿಗಳು ಹಾಗೂ ಶುಭಚಿಂತಕರು ಉಪಸ್ಥಿತರಿದ್ದರು. ಬಳಿಕ ಸಹಭೋಜನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.


