LATEST NEWS

ಮಂಗಳಾದೇವಿ ರಥಬೀದಿ ರಸ್ತೆ ವಿಭಜಕ ಪ್ರಸ್ತಾವನೆ ಕೈಬಿಡಲು ಶಾಸಕ ವೇದವ್ಯಾಸ ಕಾಮತ್ ಆಗ್ರಹ

ಮಂಗಳೂರು: ಶತಮಾನಗಳ ಭವ್ಯ ಪರಂಪರೆ ಹೊಂದಿರುವ ಮಂಗಳೂರಿನ ಐತಿಹಾಸಿಕ ಮಂಗಳಾದೇವಿ ದೇವಸ್ಥಾನದ ರಥಬೀದಿಯಲ್ಲಿ ರಸ್ತೆ ವಿಭಜಕ (ಡಿವೈಡರ್) ಅಳವಡಿಸುವ ಪ್ರಸ್ತಾವನೆಯನ್ನು ಕೂಡಲೇ ಕೈಬಿಡುವಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.


ಮಂಗಳಾದೇವಿಯ ಬ್ರಹ್ಮರಥವನ್ನು ಪಾರಂಪರಿಕ ಮರದಿಂದ ನಿರ್ಮಿಸಲಾಗಿದ್ದು ಅದರ ಚಕ್ರಗಳೇ ಸುಮಾರು 8 ಅಡಿ ಅಗಲವಿದ್ದು, ಒಟ್ಟಾರೆ ರಥದ ಅಗಲ ಸುಮಾರು 18 ಅಡಿಗಳಷ್ಟಿದೆ. ಈ ರಥೋತ್ಸವದ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಸೇವಕರು, ಸಿಬ್ಬಂದಿಗಳು ಇರಲಿದ್ದು ಈಗಿರುವ ರಸ್ತೆಯು ಸುರಕ್ಷಿತ ಹಾಗೂ ಸೂಕ್ತವಾಗಿದೆ. ಹೀಗಿರುವಾಗ ರಥಬೀದಿಯ ಮಧ್ಯಭಾಗದಲ್ಲಿ ರಸ್ತೆ ವಿಭಜಕ ಅಳವಡಿಸಿದಲ್ಲಿ ರಥದ ಸುಗಮ ಸಂಚಾರಕ್ಕೆ, ಭಕ್ತರಿಗೆ ಇನ್ನಿಲ್ಲದ ತೊಂದರೆಯಾಗುವ ಸಾಧ್ಯತೆಯಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಕಳವಳ ವ್ಯಕ್ತಪಡಿಸಿರುವುದು ಸರಿಯಿದೆ. ಹಾಗಾಗಿ ಇಲ್ಲಿ ಈಗಾಗಲೇ ಅಗಲವಾಗಿರುವ ರಸ್ತೆಯನ್ನು ಅದೇ ಮಾದರಿಯಲ್ಲಿ ಉಳಿಸಿಕೊಳ್ಳುವಂತೆ ಹಾಗೂ ರಸ್ತೆ ವಿಭಜಕ ಪ್ರಸ್ತಾವನೆಯನ್ನು ಕೈಬಿಡುವಂತೆ ಪಾಲಿಕೆ ಆಯುಕ್ತರಿಗೆ ಆಗ್ರಹಿಸಿದ್ದೇನೆ ಎಂದರು.

Share News