ಮಂಜೇಶ್ವರ: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾ.8ರಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿರುವ ಸ್ನೇಹಾಲಯ ಸಭಾಂಗಣದಲ್ಲಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರ ಶಕ್ತಿ ಮತ್ತು ಕೊಡುಗೆಗಳನ್ನು ಗೌರವಿಸುವುದರ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶವನ್ನು ವ್ಯಕ್ತಪಡಿಸಿದರು.

ಪರಿಸರ ಜಾಗೃತಿಯನ್ನು ಪ್ರತಿಬಿಂಬಿಸುವಂತೆ ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.
ವ್ಯಸನಮುಕ್ತಿ ಕೇಂದ್ರದ ವ್ಯವಸ್ಥಾಪಕರಾದ ರಾಕೇಶ್ ಲೋಬೋ ಅವರು ಸ್ವಾಗತ ಭಾಷಣ ಮಾಡಿ ಅಂತರಾಷ್ಟ್ರೀಯ ಮಹಿಳಾ ದಿನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಕಾಸರಗೋಡು ವನಿತಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಶ್ರೀಮತಿ ಅಜಿತಾ ಕೆ., ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಇರ್ಫಾನಾ ಇಕ್ಬಾಲ್, ಗೌರವ ಅತಿಥಿಯಾಗಿ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಸ್ಥಾಪಕಿ ಮತ್ತು ನಿರ್ದೇಶಕಿ ಪ್ರೊಫೆಸರ್ ಹಿಲ್ಡಾ ರಾಯಪ್ಪನ್, ಎಸ್‌ಕೆಡಿಆರ್‌ಡಿಪಿ (ರಿ.) ಮಂಜೇಶ್ವರ ತಾಲೂಕು ಯೋಜನಾ ಅಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣ, ಶಿಲ್ಪಾ ಕಿಚನ್‌ನ ಸ್ಥಾಪಕಿ ಶ್ರೀಮತಿ ಶಿಲ್ಪಾ ರಾಜ್, ಸ್ನೇಹಾಲಯದ ಕಾರ್ಯದರ್ಶಿ ಮತ್ತು ಟ್ರಸ್ಟಿ ಶ್ರೀಮತಿ ಓಲಿವಿಯಾ ಕ್ರಾಸ್ತಾ ಹಾಗೂ ಟ್ರಸ್ಟಿ ಶ್ರೀಮತಿ ಸರಿತಾ ಕ್ರಾಸ್ತಾ ಅವರ ಉಪಸ್ಥಿತರಿದ್ದರು.
ಅತಿಥಿಗಳಾದ ಶ್ರೀಮತಿ ಅಜಿತಾ ಕೆ. ಮತ್ತು ಶ್ರೀಮತಿ ಇರ್ಫಾನಾ ಇಕ್ಬಾಲ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ ಮಹಿಳಾ ಸಬಲೀಕರಣ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಹಾನುಭೂತಿಯ ಸಮಾಜ ನಿರ್ಮಾಣದಲ್ಲಿ ಎಲ್ಲರ ಸಹಕಾರದ ಅಗತ್ಯತೆಯನ್ನು ಅವರು ಒತ್ತಿಹೇಳಿದರು. ಜೊತೆಗೆ ಸ್ನೇಹಾಲಯ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಅವರು ಪ್ರಶಂಸಿಸಿದರು.
ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಸ್ಥಾಪಕಿ ಮತ್ತು ನಿರ್ದೇಶಕಿ ಪ್ರೊಫೆಸರ್ ಹಿಲ್ಡಾ ರಾಯಪ್ಪನ್ ಅವರಿಗೆ ಸಮಾಲೋಚನೆ ಮತ್ತು ಸಾಮಾಜಿಕ ಸೇವೆಯಲ್ಲಿ ನೀಡಿದ ಮಹತ್ತರ ಕೊಡುಗೆಯನ್ನು ಗೌರವಿಸಿ ವಿಶೇಷ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅವರು ಮಾನಸಿಕ ಆರೋಗ್ಯದ ಮಹತ್ವವನ್ನು ವಿವರಿಸಿ, ಸ್ನೇಹಾಲಯದ ಸ್ಥಾಪಕರಾದ ಬ್ರೋ. ಜೋಸೆಫ್ ಕ್ರಾಸ್ತಾ ಮತ್ತು ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿ, ಜೀವನದ ಸವಾಲುಗಳನ್ನು ಎದುರಿಸಲು ಸಹಾನುಭೂತಿ ಮತ್ತು ಮಾನವೀಯತೆಯ ಅಗತ್ಯತೆಯನ್ನು ವಿವರಿಸಿದರು.
ಇದೇ ಸಂದರ್ಭ ಶಿಲ್ಪಾ ಕಿಚನ್‌ನ ಸ್ಥಾಪಕಿ ಶ್ರೀಮತಿ ಶಿಲ್ಪಾ ರಾಜ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಹಿಳೆಯರ ಉದ್ಯಮಶೀಲತೆ ಮತ್ತು ಸ್ವಾವಲಂಬನೆಯ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡು, ತಮ್ಮ ಜೀವನ ಪಯಣ ಮತ್ತು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದರು. ಸ್ನೇಹಾಲಯದ ಕಾರ್ಯದರ್ಶಿ ಮತ್ತು ಟ್ರಸ್ಟಿಯಾದ ಶ್ರೀಮತಿ ಓಲಿವಿಯಾ ಕ್ರಾಸ್ತಾ ಅವರು ಸಹ ಸಭೆಯನ್ನುದ್ದೇಶಿಸಿ ಮಾತನಾಡಿ ಸಂಸ್ಥೆಯ ಪುನರ್ವಸತಿ ಕಾರ್ಯಗಳು, ಸಾಮಾಜಿಕ ಸೇವೆಗಳು ಹಾಗೂ ಮಹಿಳಾ ಸಬಲೀಕರಣದ ಮಹತ್ವವನ್ನು ವಿವರಿಸಿದರು.
ಕೌನ್ಸೆಲರ್ ಶ್ರೀ ಜೆಸ್ವಿನ್ ಎನ್. ಡಿ. ಅವರು ವಂದನೆಗೈದರು.
ಶ್ರೀಮತಿ ರೆಮೊನಾ ಎವೆಟ್ ಪೆರೈರಾ ಮತ್ತು ಹೋರೈಜನ್ ಡ್ಯಾನ್ಸ್ ಕ್ರೂ ಅವರ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಉತ್ಸಾಹ ಮತ್ತು ರಂಗು ತುಂಬಿದವು. ಸ್ನೇಹಾಲಯದ ಸ್ಥಾಪಕರಾದ ಬ್ರೋ. ಜೋಸೆಫ್ ಕ್ರಾಸ್ತಾ ಅವರು ಫಲಾನುಭವಿಗಳಿಗೆ ಸೀರೆಗಳು ಮತ್ತು ಉಡುಗೊರೆಗಳನ್ನು ವಿತರಿಸಿದರು.
ಸಂಸ್ಥೆಯ ಇನ್‌ಸ್ಟಿಟ್ಯೂಷನಲ್ ಇನ್‌ಚಾರ್ಜ್ ಲವಿಟಾ ಡಿ’ಸೋಜಾ ಹಾಗೂ ಕ್ಲಿನಿಕಲ್ ವಿಭಾಗದ ಮುಖ್ಯಸ್ಥರಾದ ಕ್ಲಿಂಟ್ ಜೋಸೆಫ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.