ಮಂಗಳೂರು : ನಗರದ ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್‌ಗೆ ಸಂಬಂಧ ಪಟ್ಟಂತೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ನೈಜತೆಯನ್ನು ಮರೆಮಾಚಿ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ನಿಜವಾದ ಕಾಳಜಿ ಇದ್ದಿದ್ದರೆ, ಜಾಮರ್ ನಿರ್ವಹಣೆ ಮಾಡುತ್ತಿರುವ ಕೇಂದ್ರ ಸರಕಾರದ ಅಧೀನದ ಟಿಸಿಐಎಲ್ ಸಂಸ್ಥೆಯ ಮೂಲಕ ಸಮಸ್ಯೆ ಬಗೆ ಹರಿಸಲು ಶ್ರಮಿಸಲಿ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವಹಕ್ಕು ವಿಭಾಗದ ಅಧ್ಯಕ್ಷ ಮನೋರಾಜ್ ರಾಜೀವ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲ್ ಜಾಮರ್ ವಿಚಾರವಾಗಿ ಮಂಗಳೂರು ವಕೀಲರ ಸಂಘ ಮತ್ತು ಸ್ಥಳೀಯರೊಬ್ಬರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆದು, ಜಾಮರ್ ನಿರ್ವಹಣೆ ಹೊಣೆ ಹೊತ್ತಿರುವ ಟಿಸಿಐಎಲ್ ಸಂಸ್ಥೆ ‘ಜಾಮರ್‌ನ ಸಮಸ್ಯೆ ಸರಿಪಡಿಸಲಾಗಿದೆ’ ಎಂದು ಹೈಕೋರ್ಟ್ ಗೆ ವರದಿ ನೀಡಿದೆ. ಸಮಸ್ಯೆ ಬಗೆ ಹರಿದಿಲ್ಲ ಎಂದಾದರೆ ಆಗಲೇ ಆಕ್ಷೇಪ ಸಲ್ಲಿಸಬಹುದಿತ್ತು ಎಂದು ಹೇಳಿದರು.
ಹೆಚ್ಚುವರಿ ಟವರ್‌ಗಳನ್ನು ಅವಡಿಸಲೂ ಅವಕಾಶವಿದೆ. ಸಂಸದ ಬ್ರಿಜೇಶ್ ಚೌಟ ಅವರ ಮೂಲಕ ಈ ಸಮಸ್ಯೆ ಯನ್ನು ಬಗೆಹರಿಸಬಹುದಿತ್ತು. ವಕೀಲರ ಸಂಘದ ಅಧ್ಯಕ್ಷರಾಗಿ ಶೇಣವ ಅವರು, ಹೈಕೋರ್ಟ್ ಪೀಠಕ್ಕೆ ಕ್ಯಾಬಿನೆಟ್ ನಲ್ಲಿ ಅನುಮೋದನೆ, ನ್ಯಾಯಾಲಯಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ, ವಕೀಲರ ಸಮಸ್ಯೆ ಗಳಿಗೆ ಸ್ಪಂದಿಸುವಂತೆ ಸಿಎಂಗೆ ಮನವಿ ಮಾಡಬಹುದಿತ್ತು. ಆದರೆ ಅದೆಲ್ಲವನ್ನು ಬಿಟ್ಟು ಜಾಮರ್ ಸಮಸ್ಯೆ ಹೆಸರಿ ನಲ್ಲಿ ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಹಾಗೂ ರಾಜಕೀಯ ಪ್ರೇರಿತವಾಗಿ ಸಚಿವ ಸಂಪುಟ ಸಭೆಯ ವೇಳೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಸದಸ್ಯರಾದ ನಂದಿನಿ, ಶಾಹೀದ್ ಬಟ್ಟೂರು, ಉಷಾ ಎಸ್., ಅರುಣಾ ಬಿ.ಪಿ., ಸುದರ್ಶನ್ ಮುಳಿಯ, ವಿನೋದರ ಪೂಜಾರಿ, ಮಂಜುನಾಥ ಪೂಜಾರಿ, ಮೋಹನ್ ಕಡೇಶ್ವಾಲ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
