LATEST NEWS

ಪೆರುವಾಯಿ: 37ನೇ ವರ್ಷದ ಶ್ರೀ ಗಣೇಶೋತ್ಸವ ಸಂಭ್ರಮ; ವೀರ ಯೋಧ ಚಂದ್ರಶೇಖರ್ ಪೂಜಾರಿ ಸೇರಿದಂತೆ ಸಾಧಕರಿಗೆ ಸನ್ಮಾನ

ವಿಟ್ಲ : ಯುವ ಚೇತನ ಕ್ಲಬ್ (ರಿ) ಪೆರುವಾಯಿ ಮತ್ತು ಶ್ರೀ ಗಣೇಶೋತ್ಸವ ಸಮಿತಿ ಪೆರುವಾಯಿ ಇದರ ಜಂಟಿ ಆಶ್ರಯದಲ್ಲಿ 37ನೇ ವರ್ಷದ “ಶ್ರೀ ಗಣೇಶೋತ್ಸವ” ಆಚರಣೆಯು ಸೆಪ್ಟೆಂಬರ್ 14 ಮತ್ತು 15 ರಂದು ಪೆರುವಾಯಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಜರುಗಿತು.

ಮಂಗಳವಾರ ನಡೆದ ಭವ್ಯ ಧಾರ್ಮಿಕ ಸಭೆಯ ದಿವ್ಯ ಉಪಸ್ಥಿತಿಯನ್ನು ವಹಿಸಿದ್ದ ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಗ್ರಾಮೀಣ ಭಾಗದಲ್ಲಿ ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಜನರನ್ನು ಒಗ್ಗೂಡಿಸಲು ಸಹಕಾರಿಯಾಗಿವೆ ಎಂದು ಆಶೀರ್ವದಿಸಿದರು.

ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನ (KPS) ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ರೈ ಡಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಣಿಲ ಶ್ರೀ ಧಾಮದ ಟ್ರಸ್ಟಿ ಶ್ರೀಮತಿ ರೇವತಿ ಪೆರ್ನೆ ಹಾಗೂ ವಿಟ್ಲದ ಪ್ರಮುಖ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಶ್ರೀ ರವಿಪ್ರಕಾಶ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಾಧಕರಿಗೆ ಗೌರವ-ಸನ್ಮಾನ:

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಭವ್ಯವಾಗಿ ಸನ್ಮಾನಿಸಲಾಯಿತು:

ನಿವೃತ್ತ ಯೋಧನಿಗೆ ಗೌರವದ ಮೇರುಗು:

ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಗಣೇಶೋತ್ಸವ ಸಮಿತಿಯ ಸಕ್ರಿಯ ಸದಸ್ಯರೂ ಆಗಿದ್ದು, ಬರೋಬ್ಬರಿ 23 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಭಾರತಾಂಬೆಯ ವೀರ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಚಂದ್ರಶೇಖರ್ ಪೂಜಾರಿ (ಕಲ್ಲಡ್ಕ ಪೆರುವಾಯಿ) ಅವರನ್ನು ಸಮಿತಿ ಹಾಗೂ ಊರ ಪರವಾಗಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿ, ದೇಶಭಕ್ತಿಯ ಕೃತಜ್ಞತೆ ಸಲ್ಲಿಸಲಾಯಿತು.

ಚಿನ್ನದ ಪದಕ ವಿಜೇತೆ ದೀಕ್ಷಾ ಟಿ.ಗೆ ಗೌರವ:

ಎಂ.ಎ. (ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ) ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರಾಂಕ್‌ನೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಸಾಧಕಿ ದೀಕ್ಷಾ ಟಿ. ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ:

ಎಸ್‌ಎಸ್‌ಎಲ್‌ಸಿ (SSLC) ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಊರಿಗೆ ಕೀರ್ತಿ ತಂದ ಪೆರುವಾಯಿ ಗ್ರಾಮದ 5 ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

ದಕ್ಷ ಲೈನ್‌ಮನ್‌ಗಳಿಗೆ ಗೌರವ:

ಪೆರುವಾಯಿ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ನಿರಂತರವಾಗಿ ಪವರ್ ಮೆನ್ (ಲೈನ್‌ಮನ್) ಗಳಾಗಿ ಸಾರ್ವಜನಿಕರ ದಕ್ಷ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ್ ಎಚ್.ಎನ್. ಮತ್ತು ಯಲಗುರೇಶ ಪಾಟೀಲ್ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಯುವ ಚೇತನ ಕ್ಲಬ್ ಹಾಗೂ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಮತ್ತು ಪೆರುವಾಯಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Share News