LATEST NEWS

ಅಕ್ಟೋಬರ್ 23 ರಂದು ಮಂಗಳೂರಿನಲ್ಲಿ ‘ಜಂತರ್ ಮಂತರ್’ ಧರಣಿ ಸತ್ಯಾಗ್ರಹ; ‘ಪ್ರಜಾಪ್ರಭುತ್ವ ಉಳಿಸಿ ಆಂದೋಲನ’ ಬೃಹತ್ ಪ್ರತಿಭಟನೆ

ಮಂಗಳೂರು: ಜನವಿರೋಧಿ SIR ನೀತಿಗಳನ್ನು ಖಂಡಿಸಿ, ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವ ಮತ್ತು ಪ್ರಜಾಪ್ರಭುತ್ವವನ್ನು ಮರಳಿ ಪಡೆಯುವ ಉದ್ದೇಶದಿಂದ ಅಕ್ಟೋಬರ್ 23 ರ ಶುಕ್ರವಾರದಂದು ದೇಶವ್ಯಾಪ್ತಿ ಪ್ರತಿಭಟನೆ ನಡೆಯಲಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಪ್ರಜಾಪ್ರಭುತ್ವ ಉಳಿಸಿ ಆಂದೋಲನ, ದಕ್ಷಿಣ ಕನ್ನಡ ಜಿಲ್ಲೆ’ ಇದರ ನೇತೃತ್ವದಲ್ಲಿ “ಮಂಗಳೂರಿನಲ್ಲಿ ಜಂತರ್ ಮಂತರ್” ಎಂಬ ಬೃಹತ್ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳೂರಿನಲ್ಲಿ ಜಂತರ್ ಮಂತರ್’ ಎಂಬ ಹೆಸರಿನಲ್ಲಿ ನಡೆಯಲಿರುವ ಈ ಸತ್ಯಾಗ್ರಹವು ಅಕ್ಟೋಬರ್ 23 ರ ಶುಕ್ರವಾರ ಸಂಜೆ 4:00 ಗಂಟೆಯಿಂದ ರಾತ್ರಿ 9:30 ರವರೆಗೆ ಮಂಗಳೂರಿನ ಐತಿಹಾಸಿಕ ಕ್ಲಾಕ್ ಟವರ್ (ಗಡಿಯಾರ ಕಂಬ) ಬಳಿ ಜರುಗಲಿದೆ.

ಪ್ರಮುಖ ಬೇಡಿಕೆಗಳು ಮತ್ತು ಹೋರಾಟದ ಉದ್ದೇಶ:

ಪ್ರಸ್ತುತ ಜಾರಿಗೆ ತರಲು ಉದ್ದೇಶಿಸಿರುವ ಜನವಿರೋಧಿ SIR (ವಿಶೇಷ ತೀವ್ರ ಪರಿಷ್ಕರಣೆ/Special Intensive Revision) ನೀತಿಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವುದು ಹಾಗೂ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಕಾಪಾಡುವುದು ಈ ಆಂದೋಲನದ ಮುಖ್ಯ ಆಶಯವಾಗಿದೆ. ದೇಶದ ಸಂವಿಧಾನ ಮತ್ತು ಪ್ರಜೆಗಳ ಮತದಾನದ ಹಕ್ಕಿನ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಪ್ರಹಾರವನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪಕ್ಷಾತೀತವಾಗಿ ಮುಖಂಡರ ಭಾಗಿ:

ಈ ಧರಣಿ ಸತ್ಯಾಗ್ರಹದಲ್ಲಿ NDA ಯೇತರ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು, ಕಾರ್ಯಕರ್ತರು, ಕರಾವಳಿ ಜಿಲ್ಲೆಯ ಪ್ರಮುಖ ಪ್ರಗತಿಪರ, ದಲಿತ, ಕಾರ್ಮಿಕ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಮುಖಂಡರುಗಳು ಹಾಗೂ ಸಂವಿಧಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ಮಂಗಳೂರು ಹಾಗೂ ಕರಾವಳಿ ಭಾಗದ ಪ್ರಜಾಪ್ರಭುತ್ವ ಪ್ರೇಮಿಗಳು ಮತ್ತು ಸಾರ್ವಜನಿಕರು ಈ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ಜಿಲ್ಲಾ ಸಹ ಸಂಚಾಲಕರಾದ ಅನ್ವರ್ ಸಾದತ್ ಬಜತ್ತೂರು ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

Share News