canaratvnews

ಯಾರೂ ಹಸಿವಿನಿಂದ ಮಲಗಬಾರದು, ಮಲಗಿದರೆ ಅದು ಉಳ್ಳವರಿಗೆ ಅವಮಾನ: ರೊನಾಲ್ಡ್ ಮಾರ್ಟಿಸ್

ಮಂಗಳೂರು: ನಾಡಿನಲ್ಲಿ ಯಾರೂ ಹಸಿವಿನಿಂದ ಮಲಗುವ ಪರಿಸ್ಥಿತಿ ಇರಬಾರದು. ಒಂದು ವೇಳೆ ಹಸಿವಿನಿಂದ ಬಳಲುತ್ತಿದ್ದರೆ, ಅದು ಉಳ್ಳವರಿಗೆ ಅವಮಾನ ಎಂದು ದುಬೈಯ ʼಬ್ಲೂ ರೋಯಲ್ ಗ್ರೂಪ್ ಆಫ್ ಕಂಪನೀಸ್‌ʼನ ಆಡಳಿತ ನಿರ್ದೇಶಕ ರೊನಾಲ್ಡ್ ಮಾರ್ಟಿಸ್ ಹೇಳಿದರು.

ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಫಿಸಿಯೋಥೆರಪಿ ಸೆಂಟರ್ ಬಳಿ ಶನಿವಾರ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ರಾತ್ರಿಯ ಊಟ ನೀಡುವ ಕಾರುಣ್ಯ ಯೋಜನೆಗೆ ಒಂದು ತಿಂಗಳ ಪ್ರಾಯೋಕತ್ವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಲ್ಲಿ ನಿರಂತರ ಎಂಟು ವರ್ಷಗಳಿಂದ ಊಟ ನೀಡುತ್ತಿರುವುದು ಮತ್ತು ಲೇಡಿಗೋಷನ್ ಆಸ್ಪತ್ರೆಗೂ ವಿಸ್ತರಿಸಿರುವುದು ಸಣ್ಣ ವಿಷಯವಲ್ಲ. ಇದು ಇಡೀ ರಾಜ್ಯಕ್ಕೆ ವಿಸ್ತರಿಸುವಂತಾಗಲಿ. ರೋಗಿಗಳಿಗೆ ಬಟ್ಟೆಯ ವ್ಯವಸ್ಥೆ ಕೂಡಾ ಮಾಡಿರುವುದು ದೇವರು ಮೆಚ್ಚುವ ಕೆಲಸ. ಇದಕ್ಕೆ ದೇವರು ದುಪ್ಪಟ್ಟು ಪ್ರತಿಫಲ ಕೊಡುತ್ತಾನೆ. ನಾನು ಎರಡು ವರ್ಷದಿಂದ ಎಂಫ್ರೆಂಡ್ಸ್ ಜತೆಗಿದ್ದು, ಮುಂದೆಯೂ ಇರುತ್ತೇನೆ ಎಂದು ಅವರು ಹೇಳಿದರು.

ಎಂಫ್ರೆಂಡ್ಸ್ ಚೆಯರ್ಮ್ಯಾನ್ ಝಕರಿಯಾ ಜೋಕಟ್ಟೆ ಅಧ್ಯಕ್ಷತೆ ವಹಿಸಿ, ರೊನಾಲ್ಡ್ ಮಾರ್ಟಿಸ್ ಅವರನ್ನು ಗೌರವಿಸಿ, ದಾನ ಮಾಡಿದವರು ಎಂದೂ ಸೋತಿಲ್ಲ. ಯಾರೂ ಆಸ್ಪತ್ರೆಗೆ ಬರುವ ಪರಿಸ್ಥಿತಿ ಬರಬಾರದು. ಬಂದವರು ಶೀಘ್ರ ಗುಣಮುಖರಾಗಿ ಹೋಗಬೇಕು. ಹಸಿದವರಿಗೆ ಊಟ ನೀಡುವ ಯೋಜನೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಎಂಫ್ರೆಂಡ್ಸ್‌ನ ಅನಿವಾಸಿ ಭಾರತೀಯ ಟ್ರಸ್ಟಿಗಳಾದ ಅಬ್ದುಲ್ಲಾ ಮೋನು ಖತರ್‌, ಅಶ್ರಫ್ ಅಬ್ಬಾಸ್, ಅಮೀರ್ ಅಬ್ಬಾಸ್, ಹಾರಿಸ್ ಕಾನತ್ತಡ್ಕ, ಮುಹಮ್ಮದ್ ಕುಕ್ಕುವಳ್ಳಿ, ದುಬೈಯ ಉದ್ಯಮಿ ಹಾಫಿಝ್ ಅಹ್ಮದ್ ಸಾಬಿತ್ ಇನ್‌ಸ್ಪೈರ್ ಉಪಸ್ಥಿತರಿದ್ದರು. ಎಂಫ್ರೆಂಡ್ಸ್ ಕಾರ್ಯಾಧ್ಯಕ್ಷ ಸುಜಾಹ್ ಮೊಹಮ್ಮದ್ ಸ್ವಾಗತಿಸಿದರು. ಸ್ಥಾಪಕ ರಶೀದ್ ವಿಟ್ಲ ನಿರೂಪಿಸಿದರು. ಕಾರುಣ್ಯ ಯೋಜನೆ ಮುಖ್ಯಸ್ಥ ಮೊಹಮ್ಮದ್ ಹನೀಫ್ ಗೋಳ್ತಮಜಲು ವಂದಿಸಿದರು.

Share News
Exit mobile version