ಮಂಗಳೂರು, ಸೆ.16: ಬಿಜೆಪಿಗೆ ಚುನಾವಣೆಯೇ ಅಜೆಂಡಾ ಆಗಿದ್ದರೆ, ಕಾಂಗ್ರೆಸ್‌ಗೆ ಅಭಿವೃದ್ಧಿಯೇ ಅಜೆಂಡಾ. ಹಾಗಾಗಿ ಕೊರಗ ಸಮುದಾಯ ಸೇರಿದಂತೆ ನಿರ್ಲಕ್ಷ್ಯಕ್ಕೆ ಒಳಪಟ್ಟ, ತಳವರ್ಗದ ಅಭಿವೃದ್ಧಿಗೆ ಪೂರಕವಾಗಿ ಸಚಿವ ಸಂಪುಟ ಸಭೆಯಲ್ಲಿ ಆದ್ಯತೆ ದೊರೆಯಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ದುರ್ಬಲರು, ಬಡವರಿಗೆ ಒತ್ತು ನೀಡಿ ಮಾಡಿರುವುದು ಇತಿಹಾಸ ಎಂದವರು ಹೇಳಿದರು.
ಮೂಲ ನಿವಾಸಿ ಕೊರಗರು ತೀರಾ ದುರ್ಬಲರು, ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯಪ್ಪ ಅವರು ಕೊರಗರ ಕಾಲನಿಯಲ್ಲಿ ವಾಸ್ತವ್ಯ ಹೂಡುವ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಅನುಕೂಲ ರೂಪಿಸಿದ್ದರು. ಮುಹಮ್ಮದ್ ಪೀರ್ ವರದಿಯ ಮೂಲಕ ಕಾಂಗ್ರೆಸ್ ಸರಕಾರ ಅವರ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಿದ್ದು, ಇನ್ನುಳಿದ ಅಗತ್ಯ ಸವಲತ್ತು, ಬೇಡಿಕೆಗಳ ಈಡೇರಿಕೆಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಕ್ರಮ ವಹಿಸಲಿದೆ ಎಂದು ಅವರು ಹೇಳಿದರು.

ಡಿಸಿ ಮನ್ನಾ ಭೂಮಿ ಇತ್ಯರ್ಥಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂಬ ಬಗ್ಗೆ ಮನವಿಯನ್ನು ಸಲ್ಲಿಸಲಾಗುವುದು. ಕಾಂಗ್ರೆಸ್ ಸರಕಾರದ ಭೂ ಮಸೂದೆ ಕಾಯಿದೆ ಮೂಲಕ ಅತೀ ಹೆಚ್ಚು ಫಲಾನುಭವಿಗಳಾದವರು ದ.ಕ. ಜಿಲ್ಲೆಯವರು. ಬ್ಯಾಂಕ್ ರಾಷ್ಟ್ರೀಕರಣದ ಫಲಿತಾಂಶವೂ ಜಿಲ್ಲೆಯ ಜನರಿಗೆ ಹೆಚ್ಚು ದೊರಕಿದೆ. 94 ಸಿ, ಬಗರ್ ಹುಕುಂ ಮೂಲಕ ಅತೀ ಹೆಚ್ಚು ಫಲಾನುಭವಿಗಳು ದ.ಕ. ಜಿಲ್ಲೆಯವರಾಗಿದ್ದರೆ, ಅದರಲ್ಲೂ ಬಂಟ್ವಾಳವು ರಾಜ್ಯದಲ್ಲೇ ನಂ. 1 ಆಗಿತ್ತು. ಕಾಗೋಡು ತಿಮ್ಮಪ್ಪ ಅವರ ಕಾಲದಲ್ಲಿ 5 ಸೆಂಟ್ಸ್ ನೀಡಲಾಗುತ್ತಿದ್ದ ಸರಕಾರಿ ಭೂಮಿಯನ್ನು 9 ಸೆಂಟ್ಸ್‌ಗೆ ಏರಿಕೆ ಮಾಡಲಾಗಿತ್ತು. ಇವೆಲ್ಲವೂ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವವರಿಗೆ ಇತಿಹಾಸದಲ್ಲಿ ಆದ ಅಭಿವೃದ್ಧಿಯ ದಾಖಲೆಗಳು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಇದೀಗ ಜೈಲು ಜಾಮರ್ ವಿಷಯವನ್ನು ಮುಂದಿಟ್ಟು ಸಚಿವ ಸಂಪುಟ ಸಭೆಗೆ ಅಡ್ಡಿ ಪಡಿಸಲು ಮುಂದಾಗಿರುವ ಬಿಜೆಪಿಯವರು ಅವರ ನಡೆ ಎಷ್ಟು ಸಮಂಜಸ ಎಂಬುದನ್ನು ತಿಳಿಯಬೇಕು.
ರಾಜ್ಯ ಸರಕಾರ ತುಳು ಭಾಷೆಯನ್ನು ಎರಡನೆ ರಾಜ್ಯಭಾಷೆಯಾಗಿ ಘೋಷಿಸಬೇಕು. ಆದರೆ ಬಿಜೆಪಿಯ ಶಾಸಕರು, ಸಂಸದರು ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಮಾಡಲಿ. ಜಿಲ್ಲೆಯಲ್ಲಿ ಆಗಿರುವ ಎನ್‌ಎಂಪಿಟಿ, ವಿಮಾನ ನಿಲ್ದಾಣ, ಪಾಸ್‌ಪೋರ್ಟ್ ಕಚೇರಿ, ರಸ್ತೆ ಅಭಿವೃದ್ಧಿ ಎಲ್ಲವೂ ಕಾಂಗ್ರೆಸ್ ಅವಧಿಯಲ್ಲಿ ಆಗಿರುವುದು, ಬಿಜೆಪಿಯವರು ಹೇಳಿಕೊಳ್ಳುವಂತಹ ಯಾವ ಕಾರ್ಯಕ್ರಮ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ದೈವಾರಾಧನೆ, ಭೂತಾರಾಧನೆಯ ಚಾಕರಿ ಮಡುವವರಿಗೂ ಪುರೋಹಿತರ ರೀತಿಯಲ್ಲಿ ವೇತನ ಶ್ರೇಣಿ ಒದಗಿಸಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಸಿಎಂಗೆ ಮನವಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಾಹುಲ್ ಹಮೀದ್, ಬಿ.ಎಲ್. ಪದ್ಮನಾಬ ಕೋಟಿಯನ್, ಆರ್ ಕೆ ಪ್ರಥ್ವಿರಾಜ್, ಮಲಾರ್ ಮೋನು, ನಿರಾಜ್ ಚಂದ್ರ ಪಾಲ್, ಎಸ್ ಅಪ್ಪಿ, ಸಬೀರ್ ಎಸ್, ನವಾಜ್ ಬದ್ಕಬೈಲ್, ಯೋಗೀಶ್ ಕುಮಾರ್, ನಝೀರ್ ಬಜಾಲ್ ರಮಾನಾಥ್ ರೈ ಯವರ ಉಪಸ್ಥಿತರಿದ್ದರು.
