ವಿಟ್ಲ: ಪೆರುವಾಯಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿರುವ ವಿಟ್ಲ ಪೊಲೀಸರು, ಈ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ, ಲಾರಿಯನ್ನು ಅಡ್ಡಗಟ್ಟಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಚಾಲಕ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ ಪ್ರತಿ-ಪ್ರಕರಣವೂ ದಾಖಲಾಗಿದೆ.

ಘಟನೆಯ ವಿವರ:
ನವೆಂಬರ್ 19ರಂದು ಸಂಜೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ದೇವಸ್ಥಾನವೊಂದರ ಬಳಿ ಲಾರಿಯೊಂದನ್ನು ಕೆಲವರು ತಡೆದು ನಿಲ್ಲಿಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಎಎಸ್ಐ ಜಯರಾಮ ಕೆ. ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೇರಳ ನೋಂದಣಿಯ (KL-59-C-4274) ಲಾರಿಯಲ್ಲಿ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿರುವುದು ಕಂಡುಬಂದಿದೆ.
ಪೊಲೀಸರು ಕೆಂಪು ಕಲ್ಲು ಲೋಡ್ ಸಹಿತ ಲಾರಿಯನ್ನು ವಶಪಡಿಸಿಕೊಂಡಿದ್ದು, ಚಾಲಕ ಮಂಜೇಶ್ವರದ ಬಾಯಾರು ನಿವಾಸಿ ಜನಾರ್ದನ (38) ಎಂಬಾತನ ವಿರುದ್ಧ ಬಿಎನ್ಎಸ್ ಕಲಂ 303(2), ಎಂಎಂಡಿಆರ್ ಕಾಯ್ದೆ ಹಾಗೂ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿಗಳ ಅಡಿಯಲ್ಲಿ ಪ್ರಕರಣ (ಅ.ಕ್ರ: 239/2026) ದಾಖಲಿಸಿಕೊಂಡಿದ್ದಾರೆ.
ಚಾಲಕನಿಂದ ಪ್ರತಿ-ದೂರು:
ಇದೇ ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಜನಾರ್ದನ ಪೊಲೀಸರಿಗೆ ದೂರು ನೀಡಿದ್ದು, ತಾನು ಕೆಂಪು ಕಲ್ಲು ಸಾಗಿಸುತ್ತಿದ್ದಾಗ ಪೆರುವಾಯಿ ದೇವಸ್ಥಾನದ ಬಳಿ ಪರಿಚಯಸ್ಥರಾದ ಸತೀಶ ಮಣಿಯಾಣಿ ಮತ್ತು ಶ್ರೀನಿವಾಸ ರೈ ಎಂಬವರು ಲಾರಿಯನ್ನು ಅಡ್ಡಗಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತನ್ನನ್ನು ಲಾರಿಯಿಂದ ಹೊರಗೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚಾಲಕನ ದೂರಿನ ಮೇರೆಗೆ ಇಬ್ಬರು ಆರೋಪಿಗಳ ವಿರುದ್ಧ ಬಿಎನ್ಎಸ್ ವಿವಿಧ ಕಲಂಗಳಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ (ಅ.ಕ್ರ: 240/2026) ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
