ಸುರತ್ಕಲ್, ನ. 19: “ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಗ್ಯಾರಂಟಿಗಳನ್ನು ಕೊಡಬೇಕಿತ್ತು. ಆದರೆ ಪ್ರತಿಯೊಂದಕ್ಕೂ ಜನರಿಂದ ಹೆಚ್ಚು ತೆರಿಗೆ ಪಡೆದು ಅದೇ ಹಣದಲ್ಲಿ ಗ್ಯಾರಂಟಿ ಕೊಡುವ ಸ್ಥಿತಿಗೆ ತಲುಪಿದೆ. ಆಡಳಿತ ವೈಫಲ್ಯದಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ,” ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಸುರತ್ಕಲ್ನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಜನಾಂದೋಲನ – ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

“ಕಾಂಗ್ರೆಸ್ ಸರ್ಕಾರ ಹಾಲು, ಪೆಟ್ರೋಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರನ್ನು ಲೂಟಿ ಮಾಡುತ್ತಿದೆ. ಉಚಿತ ಬಸ್, ಗೃಹಲಕ್ಷ್ಮಿ ಹೆಸರಿನಲ್ಲಿ ಕೊಟ್ಟು ತೆರಿಗೆ ಮೂಲಕ ವಸೂಲಿ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಲ್ಲ, ಐದು ತಿಂಗಳಿಂದ ಪಿಂಚಣಿ ಬಾಕಿ ಇದೆ, ಹಾವೇರಿಯಲ್ಲಿ 300 ಮಕ್ಕಳಿಗೆ ಬಿಸಿಯೂಟವಿಲ್ಲ. ನಿಮ್ಮ ಆಡಳಿತ ಇನ್ನು ಒಂದು ವರ್ಷ ಮಾತ್ರ ಇದ್ದು, ಜನರು ಬದಲಾವಣೆ ಬಯಸಿದ್ದಾರೆ. ಉಳಿದ ಅವಧಿಯಲ್ಲಾದರೂ ಜನರಿಗೆ ಒಳಿತು ಮಾಡಿ,” ಎಂದರು.
“ಬಿಜೆಪಿ ತಂದಿದ್ದ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆದು ಹಿಂದೂ ಸಮಾಜದ ಭಾವನೆಗಳ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಅಭಿವೃದ್ಧಿ ಬಿಟ್ಟು ದುಬಾರಿ ಶಾಲು, ಭೋಜನಕೂಟದಂತಹ ದುಂದು ವೆಚ್ಚ ಹಾಗೂ ಕೊತ್ವಾಲ್ ಮಾದರಿಯ ಆಡಳಿತವನ್ನು ಡಿ.ಕೆ. ಶಿವಕುಮಾರ್ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಧ್ವನಿಯನ್ನು ಸ್ಟಿಂಗ್ ಆಪರೇಷನ್ ಮೂಲಕ ಅಡಗಿಸಲಾಗಿದೆ,” ಎಂದು ಆರೋಪಿಸಿದರು.
“ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಬಳಿಕ ರಾಹುಲ್ ಗಾಂಧಿ ಅವರು ಉಪರಾಷ್ಟ್ರಪತಿಗಳು, ನ್ಯಾಯಾಧೀಶರು, ಪ್ರತಿಷ್ಠಿತರ ಮುಂದೆ ಸಂಸಾರದ ಗುಟ್ಟುಗಳನ್ನು ಬಹಿರಂಗಪಡಿಸುತ್ತಿದ್ದು, ರಾಷ್ಟ್ರೀಯ ಪಕ್ಷದ ವಿಪಕ್ಷ ನಾಯಕನಾಗಿರಲು ಯೋಗ್ಯರಲ್ಲ. ಪ್ರಧಾನಿ ಮೋದಿ ನಾಯಕತ್ವಕ್ಕೆ ರಾಹುಲ್ ಗಾಂಧಿ ಸಮನಲ್ಲ,” ಎಂದು ಟೀಕಿಸಿದರು.
ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, “ಬಿಜೆಪಿ ಅವಧಿಯಲ್ಲಿ 5 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಿ, ಸಾವಿರಾರು ಕೋಟಿ ರೂ. ಅಭಿವೃದ್ಧಿ ಕಾರ್ಯ ಮಾಡಲಾಗಿತ್ತು. ಕಾಂಗ್ರೆಸ್ ಬಂದ ಬಳಿಕ ಒಂದೇ ಒಂದು ಹಕ್ಕುಪತ್ರ ಕೊಟ್ಟಿಲ್ಲ, ಹೊಸ ರಸ್ತೆಯನ್ನೂ ನಿರ್ಮಿಸಿಲ್ಲ. ಬೆಲೆ ಏರಿಕೆ ಮೂಲಕ ಜನರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ,” ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, “ಕಾಂಗ್ರೆಸ್ ದುರಾಡಳಿತದಿಂದ ಕರ್ನಾಟಕದ ಗೌರವಕ್ಕೆ ಧಕ್ಕೆ ಬಂದಿದೆ. ರಾಜ್ಯದ ಅಸ್ಮಿತೆ ಉಳಿಸಲು ಬಿಜೆಪಿ ಪ್ರತಿ ಗ್ರಾಮದಲ್ಲೂ ಹೋರಾಟ ನಡೆಸಲಿದೆ,” ಎಂದರು.

ಸಭೆಗೂ ಮುನ್ನ ಸುರತ್ಕಲ್ ಕಟ್ಲದಿಂದ ಜಂಕ್ಷನ್ ವರೆಗೆ ಪಾದಯಾತ್ರೆ ನಡೆಯಿತು. ಶಾಸಕರಾದ ಸಿಮೆಂಟ್ ಮಂಜು, ವೇದವ್ಯಾಸ ಕಾಮತ್, ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಎಂಎಲ್ಸಿ ಬಾಲಕೃಷ್ಣ ಭಟ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಮುನಿಸ್ವಾಮಿ ರಾಜೇಶ್, ತಿಲಕ್ ರಾಜ್ ಕೃಷ್ಣಾಪುರ, ಕವಿತಾ ಸನಿಲ್, ಪ್ರೇಮಾನಂದ ಶೆಟ್ಟಿ, ಯತೀಶ್ ನಂದನ್ ಮಲ್ಯ, ವಿಕಾಸ್ ಪುತ್ತೂರು, ಮಂಜುಳಾ ರಾವ್, ಶ್ವೇತಾ ಕುಮಾರಿ, ಶಹನವಾಜ್ ಹುಸೈನ್, ಜೇಸಿನ್ ಡಿಸೋಜಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಸ್ವಾಗತಿಸಿ, ಪುಷ್ಪರಾಜ್ ಮುಕ್ಕ ನಿರೂಪಿಸಿದರು.
