COMMUNITY NEWSHOME

ಪೆರುವಾಯಿಯಲ್ಲಿ ಯುವಜನರ ಒಗ್ಗಟ್ಟಿನ ಸಂಕೇತವಾಗಿ ಸಂಭ್ರಮದ ‘ನವೆಂ ಜೆವಣ್’ ಆಚರಣೆ

ವಿಟ್ಲ,ಪೆರುವಾಯಿ: ಸಂತ ಜಾನ್ ಪಾಲ್ ಎರಡನೇ ವಲಯ (ವಾರಾಡೊ) ಮೊಗರ್ನಾಡ್ ಹಾಗೂ ಐ.ಸಿ.ವೈ.ಎಮ್. (ICYM) ಪೆರುವಾಯಿ ಘಟಕದ ಜಂಟಿ ಆಶ್ರಯದಲ್ಲಿ ಸೌಹಾರ್ದತೆ ಮತ್ತು ಒಗ್ಗಟ್ಟಿನ ಸಂಕೇತವಾಗಿ ‘ನವೆಂ ಜೆವಣ್’ ಕಾರ್ಯಕ್ರಮವು ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಯೋಜಿಸಲಾಯಿತು.ಪೆರುವಾಯಿ ಘಟಕದ ಯುವಜನರು ನಡೆಸಿಕೊಟ್ಟ ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ ‘ಪುದ್ವಾರ್’ ಸವಿಯುವ ಮೂಲಕ ‘ನವೆಂ ಜೆವಣ್’ ಆಚರಣೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪೆರುವಾಯಿ ಧರ್ಮಕೇಂದ್ರದ ಧರ್ಮಗುರು ಫಾ. ಸೈಮನ್ ಡಿಸೋಜಾ ಮತ್ತು ಐ.ಸಿ.ವೈ.ಎಮ್. ನಿರ್ದೇಶಕ ಫಾ. ರಿಚರ್ಡ್ ಡಿಸೋಜಾ ಅವರು ಯುವಜನರಿಗೆ ಪ್ರೇರಣಾದಾಯಿ ಹಿತವಚನ ನೀಡಿದರು.“ಯುವಜನರು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯ ಹಾಗೂ ಅಮೂಲ್ಯವಾದ ಸಮಯವನ್ನು ಸಮಾಜಮುಖಿ ಕಾರ್ಯಗಳಿಗಾಗಿ ವಿನಿಯೋಗಿಸಬೇಕು. ಸಮಾಜ ಮತ್ತು ಧರ್ಮಕೇಂದ್ರದ ಒಟ್ಟಾರೆ ಏಳಿಗೆ ಹಾಗೂ ಬೆಳವಣಿಗೆಯಲ್ಲಿ ಯುವಶಕ್ತಿ ಸದಾ ಮುಂಚೂಣಿಯಲ್ಲಿರಬೇಕು” ಎಂದು ಅವರು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಫಾ. ಸೈಮನ್ ಡಿಸೋಜಾ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಬೊರಿಮಾರ್ ಧರ್ಮಕೇಂದ್ರದ ಧರ್ಮಗುರು ಫಾ. ಪ್ಯಾಟ್ರಿಕ್ ಸಿಕ್ವೇರಾ, ಆಡಳಿತ ಮಂಡಳಿ ಉಪಾಧ್ಯಕ್ಷ ಡೆನಿಸ್ ಮೊಂತೆರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ, ಐ.ಸಿ.ವೈ.ಎಮ್. ವರಾಡೊ ಅಧ್ಯಕ್ಷ ರಿಯೋನ್ ಮೊನಿಸ್, ಕಾರ್ಯದರ್ಶಿ ಅವಿಲ್ ಡಿಸೋಜಾ, ಐ.ಸಿ.ವೈ.ಎಮ್. ಪೆರುವಾಯಿ ಅಧ್ಯಕ್ಷ ವಿನಿತ್ ಡಿಸೋಜಾ ಹಾಗೂ ಅನಿಮೇಟರ್ ಜ್ಯೋತಿ ಡಿಸೋಜಾ ಉಪಸ್ಥಿತರಿದ್ದರು.ಐ.ಸಿ.ವೈ.ಎಮ್. ವರಾಡೊ ಕಾರ್ಯದರ್ಶಿ ಅವಿಲ್ ಡಿಸೋಜಾ ಸ್ವಾಗತಿಸಿದರೆ, ಅಧ್ಯಕ್ಷ ರಿಯೋನ್ ಮೊನಿಸ್ ಧನ್ಯವಾದ ಸಮರ್ಪಿಸಿದರು. ವಿಟ್ಲದ ಶರ್ವಿನ್ ಡಿಸೋಜಾ ಸಮಾರಂಭವನ್ನು ಸುಂದರವಾಗಿ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ಯುವಜನರ ಬಾಂಧವ್ಯ ಹೆಚ್ಚಿಸಲು ವಿವಿಧ ಮನರಂಜನಾ ಆಟಗಳು ಹಾಗೂ ವಿನೋದಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಯುವಜನರು ಅತ್ಯಂತ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಮಾರೋಪದಲ್ಲಿ ಎಲ್ಲರೂ ಒಟ್ಟಾಗಿ ಭೋಜನ ಸವಿಯುವ ಮೂಲಕ ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಸಹೋದರತ್ವದ ಒಗ್ಗಟ್ಟನ್ನು ಹಂಚಿಕೊಂಡರು. ಒಟ್ಟಾರೆಯಾಗಿ ಯುವಸಮುದಾಯದ ಅಪಾರ ಬೆಂಬಲದೊಂದಿಗೆ ‘ನವೆಂ ಜೆವಣ್’ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸನ್ನು ಕಂಡಿತು.

Share News