ಮಂಗಳೂರು: ಕಾರ್ಕಳ–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಸಾಣೂರು ಜಂಕ್ಷನ್‌ನಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಾಜ್ಯದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ತಮ್ಮ ಆರೋಗ್ಯದ ಕುರಿತು ಪ್ರತಿಕ್ರಿಯಿಸಿದ್ದು, “ದೇವರ ದಯೆ ಹಾಗೂ ನಿಮ್ಮೆಲ್ಲರ ಪ್ರಾರ್ಥನೆಯಿಂದ ನಾನು ಸದ್ಯ ಗುಣಮುಖನಾಗುತ್ತಿದ್ದೇನೆ” ಎಂದು ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧೈರ್ಯ ತುಂಬಿದ್ದಾರೆ.

ಖಾಸಗಿ ಬಸ್ ಡಿಕ್ಕಿ: ಕಾರು ಜಖಂ
ಭಾನುವಾರ ರಮಾನಾಥ ರೈ ಅವರು ತಮ್ಮ ಆಪ್ತ ಕಾರ್ಯದರ್ಶಿ ಡೆನ್ಜಿಲ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಾಣೂರು ಜಂಕ್ಷನ್ ಬಳಿ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಬಂದ ಖಾಸಗಿ ಬಸ್ಸೊಂದು ಇವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ರಮಾನಾಥ ರೈ ಸೇರಿದಂತೆ ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಆಸ್ಪತ್ರೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ:
ವಿಷಯ ತಿಳಿಯುತ್ತಿದ್ದಂತೆಯೇ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ಮಾಜಿ ಸಚಿವ ರಮಾನಾಥ ರೈ ಹಾಗೂ ಅವರ ಆಪ್ತ ಕಾರ್ಯದರ್ಶಿ ಡೆನ್ಜಿಲ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿ ಚರ್ಚಿಸಿ, ಗಾಯಾಳುಗಳಿಗೆ ನೀಡಲಾಗುತ್ತಿರುವ ವೈದ್ಯಕೀಯ ನೆರವಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, .
ಪ್ರೇಮಾನಂದ ಶೆಟ್ಟಿ ,ಬಿಜೆಪಿ ಮುಖಂಡರು ಆರೋಗ್ಯ ವಿಚಾರಿಸಿದರು.

ಸದ್ಯ ರಮಾನಾಥ ರೈ ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ಇಟ್ಟಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
