ಮಂಗಳೂರು: ಇಂದು ಗರಿಗಳ ಭಾನುವಾರ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಭಾನುವಾರ ಆರಂಭಗೊಂಡಿದೆ. ಯೇಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರುಸಲೆಮಿಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು ‘ಒಲಿವ್’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರ ಮಾಡಿ ಕೊಂಡಿದ್ದರೆಂದು ಬೈಬಲ್ ಉಲ್ಲೇಖ. ಇದರ ಸಂಕೇತವಾಗಿ ಕರಾವಳಿಯ ಎಲ್ಲಾ ಚರ್ಚುಗಳಲ್ಲಿ ತೆಂಗಿನ ಗರಿಗಳನ್ನು ಹಿಡಿದು ಏ.13 (ಇಂದು) ಕ್ರೈಸ್ತರು ಭಾನುವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು.
ಮಂಗಳೂರು ನಗರದ ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಮೆರವಣಿಗೆ
ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನ ಅಥವಾ ಶುಭ ಶುಕ್ರವಾರದ ಮುಂಚಿನ ಭಾನುವಾರವನ್ನು ಗರಿಗಳ ಭಾನುವಾರವಾಗಿ ಕ್ರೈಸ್ತರು ಆಚರಿಸುತ್ತಾರೆ.
ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನಾಚರಣೆ, ಶುಕ್ರವಾರ ಯೇಸು ಕ್ರಿಸ್ತರು ಶಿಲುಬೆಗೇರಿದ ದಿನ, ಶನಿವಾರ ರಾತ್ರಿ ಜಾಗರಣೆ ಮತ್ತು ಭಾನುವಾರ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಆಚರಣೆ- ಇವು ಪವಿತ್ರ ಸಪ್ತಾಹದ ಕಾರ್ಯಕ್ರಮಗಳಾಗಿವೆ.
ಪೆರುವಾಯಿ ಫಾತಿಮಾ ಮಾತಾ ದೇವಾಲಯದಲ್ಲಿ ಧರ್ಮಗುರುಗಳಿಂದ ಗರಿಗಳ ಆರ್ಶಿವಚನ
ಭಾನುವಾರ ಬಲಿ ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್ ಆವರಣದಲ್ಲಿ ಆಶೀರ್ವಚಿಸಿ ಬಳಿಕ ಅವುಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ಕ್ರೈಸ್ತ ಬಾಂಧವರು ಯೇಸು ಕ್ರಿಸ್ತರಿಗೆ ಜೈಕಾರ ಕೂಗುತ್ತಾ ಚರ್ಚ್‌ನ ಒಳಗೆ ಪ್ರವೇಶಿಸಿದರು.
ನಗರದ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ನಡೆದ ಬಲಿಪೂಜೆ
ನಂತರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಶಿಕ್ಷೆ ವಿಧಿಸುವಲ್ಲಿಂದ ಹಿಡಿದು ಅವರು ಶಿಲುಬೆಗೇರಿ ಅಲ್ಲಿ ಮರಣವನ್ನಪ್ಪಿ, ದೇಹವನ್ನು ಸಮಾಧಿ ಮಾಡುವಲ್ಲಿ ತನಕದ ಕಥಾನಕವನ್ನು ಬೈಬಲ್‌ನಿಂದ ವಾಚಿಸಲಾಯಿತು. ಬಳಿಕ ಧರ್ಮಗುರುಗಳಿಂದ ಪ್ರವಚನ ನಡೆಯಿತು.
ನಗರದ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರ, ಮಿಲಾಗ್ರಿಸ್ ಚರ್ಚ್ ಹಾಗೂ ಪೆರುವಾಯಿ ಫಾತಿಮಾ ಮಾತೆಯ ಚರ್ಚ್ ಸೇರಿ ಎಲ್ಲಾ ಚರ್ಚುಗಳಲ್ಲಿ ಈ ಹಬ್ಬವನ್ನು ಆಚರಿಸಲಾಯಿತು.