COMMUNITY NEWSLATEST NEWS

ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆ: ಪೆರುವಾಯಿಯ ಎಮಿಲಿಯಾ ಡಿಸೋಜಾಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವ

ವಿಟ್ಲ: ದೈಹಿಕ ನ್ಯೂನತೆ ಸಾಧನೆಗೆ ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನು ಸಾಧಿಸಿ ತೋರಿಸಿದ ಪೆರುವಾಯಿ ಗ್ರಾಮದ ಮಿತ್ತಮೂಲೆ ನಿವಾಸಿ ಎಮಿಲಿಯಾ ಡಿಸೋಜಾ (ಎಮ್ಮಿ) ಅವರಿಗೆ 2026-27ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಅಂಗವೈಕಲ್ಯದ ಸವಾಲುಗಳ ನಡುವೆಯೂ ಕಳೆದ 30 ವರ್ಷಗಳಿಂದ ಸತತವಾಗಿ ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಎಮ್ಮಿ ಅವರ ಅಪ್ರತಿಮ ಸಾಧನೆ ಮತ್ತು ಸಮಾಜಮುಖಿ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.ಮಲ್ಲಿಗೆ ಕೃಷಿಯಲ್ಲಿ ಅಪೂರ್ವ ಸಾಧನೆ:ದಿನವೂ ಮುಂಜಾನೆ ಬೇಗನೆ ಏಳುವ ಎಮಿಲಿಯಾ ಅವರು ತಮ್ಮ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಪೆರುವಾಯಿ ಫಾತಿಮಾ ಮಾತೆಯ ಚರ್ಚ್ ಆವರಣಕ್ಕೆ ತಲುಪುತ್ತಾರೆ. ಅಲ್ಲಿ ಅತ್ಯಂತ ಶ್ರದ್ಧೆಯಿಂದ ಮಲ್ಲಿಗೆ ಕೃಷಿ ಮಾಡುತ್ತಿರುವ ಅವರು, ಮುಂಜಾನೆಯೇ ಹೂಗಳನ್ನು ಕೊಯ್ದು, ನಯವಾಗಿ ಕಟ್ಟಿ, ಬಳಿಕ ಮಾರಾಟಕ್ಕಾಗಿ ದೂರದ ವಿಟ್ಲಕ್ಕೆ ರವಾನಿಸುತ್ತಾರೆ. ದೈಹಿಕ ಸವಾಲುಗಳಿದ್ದರೂ ಧೃತಿಗೆಡದೆ ಮೂರು ದಶಕಗಳಿಂದ ಇವರು ನಡೆಸಿಕೊಂಡು ಬರುತ್ತಿರುವ ಈ ಕಾಯಕ ಎಲ್ಲರಿಗೂ ಮಾದರಿಯಾಗಿದೆ.ದಾನದ ಗುಣ – ಸಾಮಾಜಿಕ ಸೇವೆ:ಎಮಿಲಿಯಾ ಅವರು ಕೇವಲ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವುದಷ್ಟೇ ಅಲ್ಲದೆ, ತಮ್ಮ ಮಲ್ಲಿಗೆ ಕೃಷಿಯಿಂದ ಬರುವ ಆದಾಯದ ಬಹುಭಾಗವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ರೂಪದಲ್ಲಿ ನೀಡುತ್ತಾ ಮಾನವೀಯತೆ ಮೆರೆದಿದ್ದಾರೆ. ಚರ್ಚ್‌ನಲ್ಲಿ ನಡೆಯುವ ವಿವಿಧ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇವರು, ಪೆರುವಾಯಿ ಚರ್ಚ್ ನ ಮಹಿಳಾ ಸಂಘಟನೆ ಹಾಗೂ ಸ್ವಸಹಾಯ ಸಂಘದ ಸಕ್ರೀಯ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.ದೇಹದ ನ್ಯೂನತೆಯನ್ನೂ ಮೀರಿ ಸಮಾಜಕ್ಕೆ ಬೆಳಕಾಗಿರುವ ಎಮಿಲಿಯಾ ಡಿಸೋಜಾ (ಎಮ್ಮಿ) ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿರುವುದಕ್ಕೆ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಂ. ಸೈಮನ್ ಡಿಸೋಜಾ ಹಾಗೂ ಪೆರುವಾಯಿ ಪರಿಸರದ ಸಾರ್ವಜನಿಕರು ಗಣ್ಯರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Share News