LATEST NEWS

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇಂದಿರಾ ಗಾಂಧಿ ಅವರ 20 ಅಂಶಗಳ ಕಾರ್ಯಕ್ರಮವೇ ಭದ್ರ ಬುನಾದಿ: ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಮತೀಯ ಶಕ್ತಿಗಳ ವಿರುದ್ಧ ಹೋರಾಡಿದ ಧೀಮಂತ ನಾಯಕಿ:

ಇಂದಿರಾ ಗಾಂಧಿ ಅವರು ದೇಶದ ಸಾಮಾಜಿಕ ಸಾಮರಸ್ಯವನ್ನು ಉಳಿಸಲು ಮತೀಯ ರಾಜಕೀಯ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ನಡೆಸಿದರು. ಸಾಮಾಜಿಕ ನ್ಯಾಯದಿಂದ ವಂಚಿತರಾದ ಬಡವರು, ಶೋಷಿತರು ಮತ್ತು ದಮನಿತರ ಧ್ವನಿಯಾಗಿ ಅವರು ನಿಂತರು. ಪ್ರಸ್ತುತ ಯಾವುದೇ ಸರ್ಕಾರಗಳು ಜಾರಿಗೆ ತರುತ್ತಿರುವ ಜನಪರ ಯೋಜನೆಗಳ ಮೂಲ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳಲ್ಲೇ ಅಡಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದಿರಾ ಗಾಂಧಿಯವರ ಜನಪರ ಕಾರ್ಯಕ್ರಮಗಳ ಹೆಸರನ್ನು ಬದಲಾಯಿಸಿರುವುದೇ ಅವರ ಸಾಧನೆಯಾಗಿದೆ” ಎಂದು ಪದ್ಮರಾಜ್ ವ್ಯಂಗ್ಯವಾಡಿದರು.

ದೇಶದ ಆರ್ಥಿಕತೆಗೆ ಶಕ್ತಿ ತುಂಬಿದ ಯೋಜನೆಗಳು:

ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಜೆ.ಆರ್. ಲೋಬೊ ಅವರು, “ಇಂದಿರಾ ಗಾಂಧಿ ಅವರು ಜಾರಿಗೆ ತಂದ ಗರೀಬಿ ಹಠಾವೊ, ಪಡಿತರ ಚೀಟಿ ಯೋಜನೆ, ಅಂಗನವಾಡಿ ವ್ಯವಸ್ಥೆ, ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ ಹಾಗೂ ಬ್ಯಾಂಕುಗಳ ರಾಷ್ಟ್ರೀಕರಣದಂತಹ ಕ್ರಾಂತಿಕಾರಿ ನಿರ್ಧಾರಗಳು ದೇಶದ ಆರ್ಥಿಕ ವೃದ್ಧಿಗೆ ಮುನ್ನುಡಿ ಬರೆದವು. ಜಾತಿ ಪದ್ಧತಿ ನಿರ್ಮೂಲನೆಗೆ ಶ್ರಮಿಸಿದ ಅವರು, ಸಾಲ ಮನ್ನಾ ಯೋಜನೆ ಜಾರಿಗೆ ತರುವ ಮೂಲಕ ಜನಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣರಾದರು” ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಡಿಸಿಸಿ ಉಪಾಧ್ಯಕ್ಷರಾದ ಅಬೂಬಕ್ಕರ್ ಕುದ್ರೋಳಿ, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ಡೆನ್ನಿಸ್ ಡಿಸಿಲ್ವ, ಶಂಸುದ್ದೀನ್ ಕುದ್ರೋಳಿ, ಅಶೋಕ್ ಡಿ.ಕೆ, ಜೋಕಿಂ ಡಿಸೋಜಾ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Share News