ಮಂಗಳೂರು: ಕರಾವಳಿ ಜಿಲ್ಲೆಗಳ ಕೆಥೋಲಿಕ್ ಸಮುದಾಯದ ಅತ್ಯಂತ ಪವಿತ್ರ ಹಾಗೂ ಸಂಸ್ಕ್ರತಿ ಬೆಸೆಯುವ ಹಬ್ಬವಾದ ‘ಮೊಂತಿ ಫೆಸ್ತ್’ (ಮರಿಯಮ್ಮನವರ ಜನ್ಮದಿನೋತ್ಸವ ಹಾಗೂ ಹೊಸ ತೆನೆ ಹಬ್ಬ) ಜಿಲ್ಲೆಯಾದ್ಯಂತ ಭಕ್ತಿ, ಶ್ರದ್ಧೆ ಮತ್ತು ಕೌಟುಂಬಿಕ ಸೌಹಾರ್ದತೆಯೊಂದಿಗೆ ಆಚರಿಸಲಾಗುತ್ತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೂರಾರು ಚರ್ಚ್‌ಗಳಲ್ಲಿ ಮುಂಜಾನೆಯಿಂದಲೇ ಸಹಸ್ರಾರು ಭಕ್ತಾದಿಗಳು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಬಂಟ್ವಾಳ ತಾಲೂಕಿನ ಪೆರುವಾಯಿ ಫಾತಿಮಾ ಮಾತೆಯ ಚರ್ಚ್‌ನಲ್ಲಿ ಹಬ್ಬದ ಆಚರಣೆಯು ಅತ್ಯಂತ ಸಡಗರದಿಂದ ಜರುಗಿತು. ಕೆನರಾ ಕಮ್ಯೂನಿಕೇಷನ್ ಸೆಂಟರ್‌ನ ನಿರ್ದೇಶಕರಾದ ವಂದನೀಯ ಅನಿಲ್ ಐವನ್ ಫೆರ್ನಾಂಡಿಸ್ ಅವರು ಪ್ರಧಾನ ಯಾಜಕರಾಗಿ ಪವಿತ್ರ ಬಲಿಪೂಜೆ ಅರ್ಪಿಸಿದರು.ಬಳಿಕ ಪ್ರವಚನ ನೀಡಿದ ಅವರು, “ಮಾತೆ ಮೇರಿಯವರು ಇಡೀ ಮನುಕುಲಕ್ಕೆ ಆದರ್ಶ ತಾಯಿಯಾಗಿದ್ದಾರೆ. ಅವರು ಪ್ರೀತಿ, ಮಮತೆಯ ಸಾಕಾರ ಮೂರ್ತಿ. ಅವರ ಸಹನೆ ಹಾಗೂ ದೇವರ ಮೇಲಿನ ಅಚಲ ವಿಶ್ವಾಸ ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಬೇಕು,” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಚರ್ಚ್‌ನ ಧರ್ಮಗುರು ವಂ ಸೈಮನ್ ಡಿಸೋಜ ಹಾಗೂ ಬ್ರದರ್ ಪ್ರಿತೇಶ್ ಪಿಂಟೊ ಅವರು ಧಾರ್ಮಿಕ ವಿಧಿವಿಧಾನಗಳಲ್ಲಿ ಸಹಕರಿಸಿದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಹಬ್ಬದ ಅಂಗವಾಗಿ ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿ, ಭಕ್ತರಿಗೆ ವಿತರಿಸಲಾಯಿತು.











