ಮಂಗಳೂರು: ಭಾರತೀಯ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಡಿಯಲ್ಲಿ ನೋಟಿಸ್ ಪಡೆದಿರುವ ವಿದೇಶಿ ಅನಿವಾಸಿ (NRI) ಕನ್ನಡಿಗರು ಭೌತಿಕವಾಗಿ ಭಾರತಕ್ಕೆ ಬಂದು ಹಾಜರಾಗುವ ನಿಯಮಕ್ಕೆ ವಿನಾಯಿತಿ ನೀಡಿ, ವರ್ಚುವಲ್ ಮೂಲದ ಹಾಜರಾತಿಗೆ ಅವಕಾಶ ನೀಡುವಂತೆ ಕರ್ನಾಟಕ ಎನ್‌ಆರ್‌ಐ ಫೋರಂ ಸೌದಿ ಅರೇಬಿಯಾ ಸಮಿತಿಯು ರಾಜ್ಯ ಸಚಿವ ಯು.ಟಿ. ಖಾದರ್ ಅವರಿಗೆ ತಡರಾತ್ರಿ ಭೇಟಿಯಾಗಿ ಮಹತ್ವದ ಮನವಿ ಸಲ್ಲಿಸಿದೆ.

ಎನ್‌ಆರ್‌ಐ ಫೋರಂ ಅಧ್ಯಕ್ಷರಾದ ಜನಾಬ್ ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ ಮತ್ತು ಕಾರ್ಯಕಾರಿ ಸಮಿತಿಯ ನಿರ್ದೇಶನ ಹಾಗೂ ಮಾರ್ಗದರ್ಶನದ ಮೇರೆಗೆ, ಎನ್‌ಆರ್‌ಐ ಸೌದಿ ಫೋರಂ ಪದಾಧಿಕಾರಿಗಳ ನಿಯೋಗವು ಸೆಪ್ಟೆಂಬರ್ 6ರ ತಡರಾತ್ರಿ 1 ಗಂಟೆಯ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹಜ್ಜ್ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಸಾಹೇಬರನ್ನು ಖುದ್ದಾಗಿ ಭೇಟಿಯಾಯಿತು.

ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ವಿದೇಶಗಳಲ್ಲಿ ನೆಲೆಸಿರುವ ಎನ್‌ಆರ್‌ಐ ಕನ್ನಡಿಗರಿಗೆ ನೋಟಿಸ್ ಜಾರಿಯಾಗಿದ್ದು, ಅದರಲ್ಲಿ ಸಂಬಂಧಪಟ್ಟವರು ಕಡ್ಡಾಯವಾಗಿ ಭಾರತಕ್ಕೆ ಬಂದು ಭೌತಿಕವಾಗಿ ಅಧಿಕಾರಿಗಳ ಮುಂದೆ ಹಾಜರಾಗಬೇಕು ಎಂಬ ನಿಯಮವಿದೆ. ಇದರಿಂದ ಉದ್ಯೋಗ ನಿಮಿತ್ತ ಹೊರದೇಶಗಳಲ್ಲಿರುವ ಕನ್ನಡಿಗರಿಗೆ ಭಾರಿ ತೊಂದರೆಯಾಗುತ್ತಿರುವುದನ್ನು ನಿಯೋಗವು ಸಚಿವರ ಗಮನಕ್ಕೆ ತಂದಿತು. ಭಾರತಕ್ಕೆ ಬರುವ ಅಗತ್ಯವಿಲ್ಲದೇ, ಪಾಸ್‌ಪೋರ್ಟ್‌ನ ಪ್ರತಿಗಳನ್ನು ಸಲ್ಲಿಸುವ ಮೂಲಕ ಅಥವಾ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವರ್ಚುವಲ್ (ಆನ್‌ಲೈನ್) ಮೂಲಕ ಹಾಜರಾಗಲು ಚುನಾವಣಾ ಆಯೋಗದಿಂದ ವಿಶೇಷ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮನವಿ ಮಾಡಲಾಯಿತು.

ಸಚಿವರಿಂದ ತಕ್ಷಣದ ಸ್ಪಂದನೆ ಮತ್ತು ಭರವಸೆ:
ಅತ್ಯಂತ ಕಾರ್ಯನಿರತರಾಗಿದ್ದಾಗಲೂ ತಡರಾತ್ರಿಯ ಅವಧಿಯಲ್ಲಿ ಮನವಿಯನ್ನು ಆಲಿಸಿದ ಸಚಿವ ಯು.ಟಿ. ಖಾದರ್ ಅವರು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ವಿಷಯದ ಗಂಭೀರತೆಯನ್ನು ಅರಿತು, ಈಗಾಗಲೇ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಈ ಕುರಿತು ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಎನ್‌ಆರ್‌ಐ ಕನ್ನಡಿಗರಿಗೆ ಅನುಕೂಲವಾಗುವಂತೆ ಪಾಸ್‌ಪೋರ್ಟ್ ದಾಖಲೆ ಸಲ್ಲಿಕೆ ಅಥವಾ ವರ್ಚುವಲ್ ಹಾಜರಾತಿ ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತರಲು ಶೀಘ್ರದಲ್ಲೇ ಚುನಾವಣಾ ಆಯೋಗದೊಂದಿಗೆ ನಿಯಮಾವಳಿ ರೂಪಿಸುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಚಿವರಿಂದ ಲಭಿಸಿರುವ ದೃಢ ಭರವಸೆಯ ಹಿನ್ನೆಲೆಯಲ್ಲಿ, ಎಸ್‌ಐಆರ್ ಪ್ರಕ್ರಿಯೆಯ ನೋಟಿಸ್ ಪಡೆದಿರುವ ಯಾವುದೇ ಎನ್‌ಆರ್‌ಐ ಕನ್ನಡಿಗರು ಆತಂಕಪಡುವ ಅಗತ್ಯವಿಲ್ಲ ಎಂದು ಎನ್‌ಆರ್‌ಐ ಫೋರಂ ತಿಳಿಸಿದೆ. ಭಾರತಕ್ಕೆ ಭೌತಿಕವಾಗಿ ಪ್ರಯಾಣ ಬೆಳೆಸುವ ಅನಿವಾರ್ಯತೆ ಇಲ್ಲದಂತೆ ಸುಲಭ ಪ್ರಕ್ರಿಯೆ ಜಾರಿಗೆ ಬರಲಿದ್ದು, ಇದು ಹೊರದೇಶಗಳಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರಿಗೆ ಅತ್ಯಂತ ಸಂತಸದ ಹಾಗೂ ನಿರಾಳತೆಯ ಸುದ್ದಿಯಾಗಿದೆ.
ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ನಿಯೋಗದಲ್ಲಿ ಎನ್‌ಆರ್‌ಐ ಫೋರಮ್ ಸೌದಿ ಅರೇಬಿಯಾದ ಸಲಹೆಗಾರರಾದ ಫಾರೂಕ್ ಮೂಲ್ಕಿ, ಖಜಾಂಚಿ ಆಯಾಜ್ ಕೈಕಂಬ, ಮುಖ್ಯ ಸಂಯೋಜಕರಾದ ರಫೀಕ್ ಕೆ. ಎಚ್, ಅಬ್ದುಲ್ ಹಮೀದ್ ಆರಮ್ಯಾಕ್ಸ್ ಹಾಗೂ ಮುಸ್ತಾಕ್ ಎಂ.ಎಚ್ ಉಪಸ್ಥಿತರಿದ್ದರು.
