LATEST NEWS

ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಚಿವ ಶಿವರಾಜ್ ತಂಗಡಗಿ ಜೊತೆ ಶಾಸಕ ಮಂಜುನಾಥ ಭಂಡಾರಿ ಭಾಗಿ

ಮಂಗಳೂರು: ಅಮೆರಿಕದ ಫಿಲಡೆಲ್ಫಿಯಾದಲ್ಲಿ ಸೆಪ್ಟೆಂಬರ್ 4ರಿಂದ 6ರವರೆಗೆ ನಡೆಯುತ್ತಿರುವ ಪ್ರತಿಷ್ಠಿತ ‘ಅಕ್ಕ’ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರು ಸಕ್ರಿಯವಾಗಿ ಭಾಗವಹಿಸಿದರು.

ಈ ಅಪೂರ್ವ ಸಾಂಸ್ಕೃತಿಕ ಮಿಲನದಲ್ಲಿ ಶಾಸಕರುಗಳಾದ ಬಸವನಗೌಡ ಬಾದರ್ಲಿ, ಟಿ.ಎ. ಶರವಣ ಸೇರಿದಂತೆ ನಾಡಿನ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ವಿಶ್ವದ ವಿವಿಧ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಕನ್ನಡಿಗರು ಈ ಸಮ್ಮೇಳನದಲ್ಲಿ ಒಂದೆಡೆ ಸೇರಿದ್ದಾರೆ. ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಸಂರಕ್ಷಿಸುವುದು ಹಾಗೂ ಅದನ್ನು ಮುಂದಿನ ಪೀಳಿಗೆಗೆ ಯಶಸ್ವಿಯಾಗಿ ತಲುಪಿಸುವುದು ಈ ಮಹಾಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಇಂದಿನ ಡಿಜಿಟಲ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲೂ ಕನ್ನಡ ಭಾಷೆಯನ್ನು ಸಶಕ್ತವಾಗಿ ಉಳಿಸಿ-ಬೆಳೆಸಲು ಜಗತ್ತಿನಾದ್ಯಂತ ಇರುವ ಎಲ್ಲಾ ಕನ್ನಡಿಗರು ಒಟ್ಟಾಗಿ ಶ್ರಮಿಸಬೇಕು ಎಂಬ ಮಹತ್ವದ ಸಂದೇಶವನ್ನು ಸಮ್ಮೇಳನದಲ್ಲಿ ಸಾರಲಾಯಿತು.

ಈ ಬಾರಿಯ ಸಮ್ಮೇಳನವು ‘ಅಕ್ಕ’ (AKKA) ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವದ ಸಂಭ್ರಮವಾಗಿದ್ದು, ಜಾಗತಿಕ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಗೋಷ್ಠಿಗಳು, ಕನ್ನಡ ಸಿನಿಮಾ ಪ್ರದರ್ಶನ ಹಾಗೂ ವೈವಿಧ್ಯಮಯ ಕನ್ನಡಪರ ಚಟುವಟಿಕೆಗಳು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿವೆ.

Share News