DAKSHINA KANNADALATEST NEWS

ಯಶಸ್ವಿನಿ ಮಹಿಳಾ ಮಂಡಳಿಯಿಂದ ವಿನೂತನ ಕೆಸರುಗದ್ದೆ ಕ್ರೀಡಾಕೂಟ; ‘ನೇಜಿದ ಕಂಡೊಡ್ ಪೊಂಜೋವುಲೆನ ಗೊಬ್ಬು’

ಮಂಗಳೂರು: ಬಲ್ಮಠದ ಯಶಸ್ವಿನಿ ಮಹಿಳಾ ಮಂಡಲಿ (ರಿ.) ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಅಳಪೆಯ ಮಹಾಕಾಳಿ ಕ್ಷೇತ್ರದ ಬಳಿಯಿರುವ ಸದಾಶಿವ ಭಂಡಾರಿ ಗದ್ದೆಯಲ್ಲಿ ಮಹಿಳೆಯರಿಗಾಗಿ “ನೇಜಿದ ಕಂಡೊಡ್ ಪೊಂಜೋವುಲೆನ ಗೊಬ್ಬು” ಎನ್ನುವ ವಿನೂತನ ಕೆಸರುಗದ್ದೆ ಆಟೋಟ ಸ್ಪರ್ಧೆಗಳ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಸಾಂಕೇತಿಕವಾಗಿ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಶ್ರೀಮತಿ ಶೋಭಾ ಪೂಜಾರಿ ಅವರು ಮಾತನಾಡಿ, “30 ವರ್ಷದೊಳಗಿನ ಮಹಿಳೆಯರಿಗಾಗಿ ಮಾತ್ರ ಆಯೋಜಿಸಿರುವ ಈ ಕೆಸರುಗದ್ದೆ ಕ್ರೀಡಾಕೂಟ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಮಹಿಳೆಯರು ಇಂದಿನ ದಿನಗಳಲ್ಲಿ ಯಾರಿಗೂ ಕಮ್ಮಿ ಇಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು” ಎಂದು ಕರೆ ನೀಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕೆಸರು ಗದ್ದೆಗೆ ಹಾಲು ಎರೆಯುವ ಮೂಲಕ ಯಶಸ್ವಿನಿ ಮಹಿಳಾ ಮಂಡಲಿಯ ಅಧ್ಯಕ್ಷರಾದ ಚಂಚಲ ತೇಜೋಮಯ ಅವರು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.

ಮಹಿಳೆಯರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ: ವಿಜಯಲಕ್ಷ್ಮಿ ಭಟ್:

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಮಹಿಳಾ ಸಭಾದ ಅಧ್ಯಕ್ಷರಾದ ವಿಜಯಲಕ್ಷ್ಮಿ ಭಟ್ ಮಾತನಾಡಿ, “ಕಳೆದ 25 ವರ್ಷಗಳ ಹಿಂದೆ ಪ್ರಾರಂಭವಾದ ಯಶಸ್ವಿನಿ ಮಹಿಳಾ ಮಂಡಲಿಯು ಸಮಾಜದಲ್ಲಿ ಅರ್ಥಪೂರ್ಣ ಹಾಗೂ ಸುಂದರವಾದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಬೆಳ್ಳಿ ಹಬ್ಬದ ಅಂಗವಾಗಿ ಮಹಿಳೆಯರಿಗಾಗಿಯೇ ವಿಶೇಷವಾಗಿ ಗದ್ದೆಯಲ್ಲಿ ಏರ್ಪಡಿಸಿರುವ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ಸಮಾಜಮುಖಿ ಆಯೋಜಕರನ್ನು ಬೆನ್ನುತಟ್ಟಿ ಹುರಿದುಂಬಿಸಿದಾಗ ಮಾತ್ರ ಮತ್ತಷ್ಟು ಉತ್ತಮ ಸೇವೆ ಮಾಡಲು ಸಾಧ್ಯವಾಗುತ್ತದೆ” ಎಂದು ಮಂಡಲಿಯ ಕಾರ್ಯವನ್ನು ಶ್ಲಾಘಿಸಿದರು.

ಒಗ್ಗಟ್ಟಿನಿಂದ ಸಾಧನೆ ಮಾಡಿ: ಕಲಾವತಿ ಬಿ. ಮುಖ್ಯ ಅತಿಥಿ, ಇನ್ನರ್ ವೀಲ್ ಸಂಸ್ಥೆಯ ಕಲಾವತಿ ಬಿ. ಮಾತನಾಡಿ, “ಇಂತಹ ಗ್ರಾಮೀಣ ಶೈಲಿಯ ಆಟೋಟ ಸ್ಪರ್ಧೆಗಳು ಮಹಿಳೆಯರಲ್ಲಿ ಹೊಸ ಉತ್ಸಾಹ ಮತ್ತು ಸ್ಪೂರ್ತಿಯನ್ನು ತುಂಬುತ್ತವೆ. ನಾವೆಲ್ಲರೂ ಒಗ್ಗಟ್ಟಾಗಿ ಬಾಳಿ, ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಿಕೊಡಬೇಕು” ಎಂದು ಸಲಹೆ ನೀಡಿದರು.

ಬೆಳ್ಳಿ ಹಬ್ಬದ ಅಂಗವಾಗಿ 25 ಕಾರ್ಯಕ್ರಮಗಳ ಯೋಜನೆ: ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಲಿಯ ಅಧ್ಯಕ್ಷರಾದ ಶ್ರೀಮತಿ ಚಂಚಲ ತೇಜೋಮಯ ಅವರು, “ಬಲ್ಮಠ ಸರಕಾರಿ ಶಾಲೆಯ ಬಡ ಮಕ್ಕಳಿಗೆ ಅನ್ನ ದಾಸೋಹ ನೀಡುವ ಮೂಲಕ ಪ್ರಾರಂಭವಾದ ನಮ್ಮ ಯಶಸ್ವಿನಿ ಮಂಡಲಿಯು, ಈಗ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ 25 ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಹೊಂದಿದೆ” ಎಂದರು. ಮುಂದುವರಿದು ಮಾತನಾಡಿದ ಅವರು, “ಇದುವರೆಗೆ ಗದ್ದೆಗೆ ಇಳಿಯದ ಅದೆಷ್ಟೋ ಮಹಿಳೆಯರು ಇಂದು ಗದ್ದೆಯಲ್ಲಿ ನಡೆದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಕೆಸರುಗದ್ದೆಯ ಸ್ಪರ್ಶದ ಆನಂದವನ್ನು ಅನುಭವಿಸಿದರು. ವಿವಿಧ ವೇಷಭೂಷಣಗಳನ್ನು ತೊಟ್ಟು ಜಾನಪದ ನೃತ್ಯಕ್ಕೆ ಗದ್ದೆಯಲ್ಲಿ ಹೆಜ್ಜೆ ಹಾಕಿದ ಅಮೋಘ ದೃಶ್ಯ ಯಶಸ್ವಿನಿಯ ಯಶಸ್ಸಿನ ಮತ್ತೊಂದು ಮೆಟ್ಟಲಾಗಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ ನಮಗೆ ಸಂತೃಪ್ತ ಭಾವವಿದೆ” ಎಂದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ಗದ್ದೆಯನ್ನು ನೀಡಿದ ಶ್ರೀಮತಿ ಜಲಜಾಕ್ಷಿ ಅವರಿಗೆ ಮಂಡಳಿಯಿಂದ ಗೌರವ ಪೂರ್ವಕ ಸನ್ಮಾನ ಮಾಡಲಾಯಿತು.

ಸ್ಪರ್ಧೆಗಳ ವಿವರ ಮತ್ತು ವಿಜೇತರು:ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಜಾನಪದ ನೃತ್ಯ ಸ್ಪರ್ಧೆಗಳು ಜರುಗಿದವು. ಸ್ಪರ್ಧೆಯಲ್ಲಿ ವಿಜೇತರಾ ದವರಿಗೆ ಅಧ್ಯಕ್ಷರು ಹಾಗೂ ಅತಿಥಿಗಳು ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಿದರು.

ಜಾನಪದ ನೃತ್ಯ ಸ್ಪರ್ಧೆ: ಭ್ರಾಮರಿ ಮಹಿಳಾ ಮಂಡಳ ಅಶೋಕನಗರ್ ತಂಡ (ಪ್ರಥಮ), ಎಕ್ಕೂರು ಬಾಬಣ್ಣ ಮಹಿಳಾ ತಂಡ (ದ್ವಿತೀಯ), ಬೈಕಂಪಾಡಿ ಮಹಿಳಾ ಮಂಡಲ (ತೃತೀಯ).

ಹಗ್ಗಜಗಾಟ ಸ್ಪರ್ಧೆ: ಬೈಕಂಪಾಡಿ ಮಹಿಳಾ ತಂಡ (ಪ್ರಥಮ), ಎಕ್ಕೂರು ಬಾಬಣ್ಣ ಮಹಿಳಾ ತಂಡ (ದ್ವಿತೀಯ).

ಕಾರ್ಯಕ್ರಮದಲ್ಲಿ ಪ್ರತಿಭಾನಾಥ್ ಮತ್ತು ಅನಿತಾ ಶೇಟ್ ತಂಡದವರು ಪ್ರಾರ್ಥಿಸಿದರು. ನಾಗವೇಣಿ ಮತ್ತು ರಮಣಿ ಬೋಳೂರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ಪ್ರತಿಭಾ ನಾಥ್ ಮತ್ತು ಕವಿತಾ ಮನೋಹರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಂಡಲಿಯ ಪ್ರಮುಖರಾದ ಅನಿತಾ ಶೇಟ್, ಲಯನ್ ಸುಮತಿ ಹೆಗ್ಡೆ, ಇನ್ನರ್ ವೀಲ್ ಶಬರಿ ಭಂಡಾರಿ, ಮಹಿಳಾ ಒಕ್ಕೂಟದ ದೇವಕಿ ಅಚ್ಚುತ, ರೇಖಾ ಶೆಟ್ಟಿ, ರಮಣಿ ಉಮೇಶ್, ಸುಮತಿ ಶೆಣೈ, ಜ್ಯೋತಿ, ಸರಿತಾ ಮಹೇಶ್, ವೀಣಾ ಶೆಟ್ಟಿ, ಅನಿತಾ, ಜಯ ಸಾಲಿಯಾನ್, ಶೋಭಾ ನಾಗೇಶ್, ಸಂಧ್ಯಾ, ಸುಮಲತಾ ಸೇರಿದಂತೆ ಅಪಾರ ಸಂಖ್ಯೆಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share News