COMMUNITY NEWSLATEST NEWS

ಮುಲ್ಕಿಯಲ್ಲಿ ‘ಮಹಿಳೋತ್ಸವ 2026’ ರಾಷ್ಟ್ರೀಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಮಂಗಳೂರು, ಅ 18: ಭಾರತೀಯ ಕಥೋಲಿಕ ಬಿಷಪ್‌ಗಳ ಮಂಡಳಿ (ಸಿಸಿಬಿಐ) ಮಹಿಳಾ ಆಯೋಗದ ಆಶ್ರಯದಲ್ಲಿ ಮಂಗಳೂರಿನ ಮುಲ್ಕಿ ದಿವೈನ್ ಕಾಲ್ ಸೆಂಟರ್‌ನಲ್ಲಿ ‘ಮಹಿಳೋತ್ಸವ 2026’ ಎಂಬ 3 ದಿನಗಳ 8ನೇ ಆಲ್ ಇಂಡಿಯಾ ರಾಷ್ಟ್ರೀಯ ಮಹಿಳಾ ಸಮ್ಮೇಳನಕ್ಕೆ ಭಾನುವಾರ ಅದ್ಧೂರಿ ಚಾಲನೆ ನೀಡಲಾಯಿತು.

ಸಹಭಾಗಿತ್ವದಲ್ಲಿ ಮಹಿಳೆಯರು | ನ್ಯಾಯಯುತ ಸಮಾಜಕ್ಕಾಗಿ ಮಹಿಳೆಯರು’ ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಬೃಹತ್ ಸಮಾವೇಶದಲ್ಲಿ ಭಾರತದ 80 ಧರ್ಮಪ್ರಾಂತ್ಯಗಳ ಬಿಷಪ್‌ಗಳು, ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗೂ ನೂರಾರು ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದಾರೆ.


ಸಾಂಸ್ಕೃತಿಕ ಮೆರವಣಿಗೆ ಮತ್ತು ವೈವಿಧ್ಯಮಯ ಉದ್ಘಾಟನೆ
ಡಾ. ಪ್ರೀತಿ ಕೀರ್ತಿ ಡಿಸೋಜ ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಚತ್ತೀಸ್‌ಗಢ ಮತ್ತು ಒಡಿಶಾದ ಗಿರಿಜನ ಮಹಿಳೆಯರು ಸಾಂಪ್ರದಾಯಿಕ ನೃತ್ಯ ಹಾಗೂ ಜಾನಪದ ಗೀತೆಗಳ ಮೂಲಕ ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿಕೊಂಡರು.


ಸಿಸಿಬಿಐ ಅಧ್ಯಕ್ಷರೂ, ಗೋವಾ ಮತ್ತು ದಮನ್‌ನ ಆರ್ಚ್‌ಬಿಷಪ್‌ ಆಗಿರುವ ಫಿಲಿಪ್ ನೇರಿ ಕಾರ್ಡಿನಲ್ ಫೆರಾವೊ ಅವರನ್ನು ಸಿಸಿಬಿಐ ಮಹಿಳಾ ಆಯೋಗದ ರಾಷ್ಟ್ರೀಯ ಅಧ್ಯಕ್ಷರಾದ ಬಿಷಪ್ ಕಿಶೋರ್ ಕುಮಾರ್ ಕುಜೂರ್, ಸದಸ್ಯ ಬಿಷಪ್ ಆಂಟೋನಿಸ್ ಬಾರಾ, ರಾಷ್ಟ್ರೀಯ ಕಾರ್ಯದರ್ಶಿ ಸಿಸ್ಟರ್ ಲಿಡ್ವಿನ್ ಫೆರ್ನಾಂಡಿಸ್, ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವೆರಿ ರೆ. ಮೊನ್ಸಿಂಜೋರ್ ಮೆಕ್ಸಿಮ್ ಎಲ್. ನೊರೊನ್ಹಾ, ಕಣ್ಣೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂದನೀಯ ಡಾ. ಜೋಯ್ ಪೈನಾಡತ್, ಉಡುಪಿಯ ಸಂಪದ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ರೆಜಿನಾಲ್ಡ್ ಪಿಂಟೋ ಸೇರಿದಂತೆ ಇತರ ಗಣ್ಯರು ಅದ್ಧೂರಿಯಾಗಿ ಸ್ವಾಗತಿಸಿದರು.

ಕರಾವಳಿಯ ಕೃಷಿ ಸಂಸ್ಕೃತಿ ಮತ್ತು ಸೌಹಾರ್ದತೆಯ ಸಂಕೇತವಾಗಿರುವ ಅಡಿಕೆ ಪಿಂಗಾರವನ್ನು (ಪಿಂಗಾರ ಹೂವು) ಬಿಡಿಸುವ ಮೂಲಕ ಸಮಾವೇಶವನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು.


ಶತಮಾನೋತ್ಸವ ವಿಶ್ವ ಮಿಷನ್ ರವಿವಾರ: ಕಾರ್ಡಿನಲ್ ದಿಕ್ಸೂಚಿ ಭಾಷಣ
ಪ್ರಸಕ್ತ ವರ್ಷದ ವಿಶ್ವ ಮಿಷನ್ ರವಿವಾರದ ಶತಮಾನೋತ್ಸವದ ಸಂದರ್ಭದಲ್ಲಿ ದಿವ್ಯಬಲಿಪೂಜೆ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡಿದ ಕಾರ್ಡಿನಲ್ ಫಿಲಿಪ್ ನೇರಿ ಫೆರಾವೊ, “ಮಿಷನ್ ಅಥವಾ ಸೇವೆ ಎಂಬುದು ಯಾವುದೇ ಮಾನವ ಆಲೋಚನೆಯಿಂದ ಬರುವುದಲ್ಲ, ಅದು ದೇವರಿಂದ ದೊರೆತ ಕೊಡುಗೆ. ಸಮಾಜ ಮತ್ತು ಚರ್ಚ್‌ನ ಅಭಿವೃದ್ಧಿಯಲ್ಲಿ ಮಹಿಳೆಯರು ಕೇವಲ ಸಹಾಯಕಿಯರಲ್ಲ, ಬದಲಿಗೆ ಮುಖ್ಯ ವಾಹಿನಿಯ ಪಾಲುದಾರರು” ಎಂದು ಕರೆ ನೀಡಿದರು.


ಮಹಿಳೆಯರ ಮೇಲಿನ ತಾರತಮ್ಯ ಮತ್ತು ಪುರುಷಪ್ರಧಾನ ವ್ಯವಸ್ಥೆಯ ಶೋಷಣೆಗಳನ್ನು ತೊಡೆದುಹಾಕಬೇಕೆಂದು ಪ್ರತಿಪಾದಿಸಿದ ಅವರು, ಚರ್ಚ್ ಮತ್ತು ಸಮಾಜದ ನಿರ್ಧಾರ ಕೈಗೊಳ್ಳುವ ಹಂತಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು ಎಂದರು. ‘ಮಿಷನ್ 2033’ ಕಲ್ಪನೆಯಡಿ ಈಗಾಗಲೇ 46 ಧರ್ಮಪ್ರಾಂತ್ಯಗಳಲ್ಲಿ 35,000ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು.


ಒಂಟಿ ತಾಯಂದಂದಿರಿಗೆ ‘ಮಾತ್ರೋನ್ನತಿ’ ಯೋಜನೆ: ₹1 ಕೋಟಿ ದೇಣಿಗೆ

ಮಂಗಳೂರು ಧರ್ಮಪ್ರಾಂತ್ಯದ ಮಹಿಳಾ ಆಯೋಗವು ಒಂಟಿ ತಾಯಂದಿರ (Single Mothers) ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಹಮ್ಮಿಕೊಂಡಿರುವ ‘ಮಾತ್ರೋನ್ನತಿ’ ಎಂಬ ನೂತನ ಯೋಜನೆಗೆ ಚಾಲನೆ ನೀಡಲಾಯಿತು. ಕೊಡುಗೆದಾರರಾದ ಜಾನ್ ಸ್ಯಾಮ್ಯುಯೆಲ್ ಅವರು ತಮ್ಮ ದಿವಂಗತ ತಾಯಿ ರೋಸಿ ಸ್ಯಾಮ್ಯುಯೆಲ್ ಅವರ ಸ್ಮರಣಾರ್ಥ ₹1 ಕೋಟಿ ರೂಪಾಯಿಗಳ ನಿಧಿಯನ್ನು ಮಂಗಳೂರು ಧರ್ಮಪ್ರಾಂತ್ಯದ ಮಹಿಳಾ ಆಯೋಗದ ಕಾರ್ಯದರ್ಶಿ ಅನಿತಾ ಫ್ರಾಂಕ್ ಅವರಿಗೆ ಹಸ್ತಾಂತರಿಸಿದರು.


ಸಾಧಕರಿಗೆ ಸನ್ಮಾನ ಮತ್ತು ಹೊಸ ಜವಾಬ್ದಾರಿ
ಸಾಮಾಜಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಗಣ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು:

ಸಾಧಕಿಯರಿಗೆ ಗೌರವ: ವೈಟ್ ಡವ್ಸ್ ಸಂಸ್ಥೆಯ ಸ್ಥಾಪಕಿ ಕೊರಿನ್ ಆಂಟೋನೆಟ್ ರಸ್ಕಿನ್ಹಾ ಅವರಿಗೆ (ಅನುಪಸ್ಥಿತಿಯಲ್ಲಿ) ಹಾಗೂ ಅವೆ ಮರಿಯಾ ಪಾಲಿಯೇಟಿವ್ ಕೇರ್‌ನ ನಿರ್ದೇಶಕಿ ಡಾ. ಲವೀನಾ ನೊರೊನ್ಹಾ ಅವರಿಗೆ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.


ಹೊಸ ಪ್ರಾದೇಶಿಕ ಕಾರ್ಯದರ್ಶಿ ಆಯ್ಕೆ: ಮಂಗಳೂರು ಧರ್ಮಪ್ರಾಂತ್ಯದ ಮಹಿಳಾ ಆಯೋಗದ ಕಾರ್ಯದರ್ಶಿ ಅನಿತಾ ಫ್ರಾಂಕ್ ಅವರನ್ನು ಬೆಂಗಳೂರಿನ ಆರ್ಚ್‌ಬಿಷಪ್ ಅವರು ಪ್ರಾದೇಶಿಕ ಮಹಿಳಾ ಆಯೋಗದ ನೂತನ ಕಾರ್ಯದರ್ಶಿಯಾಗಿ ನೇಮಕಗೊಳಿಸಿರುವುದಾಗಿ ಪ್ರಕಟಿಸಲಾಯಿತು.


ಅಪರಾಹ್ನದ ಗೋಷ್ಠಿ ಮತ್ತು ಪ್ರದರ್ಶನ
ಮಧ್ಯಾಹ್ನದ ನಂತರ ಸಿಸಿಬಿಐ ಮೀಡಿಯಾ ಅಪೋಸ್ಟಲೇಟ್‌ನ ಸಿಇಒ ನಿಗಿಲ್ ಫೆರ್ನಾಂಡಿಸ್ ಮತ್ತು ವಂದನೀಯ ಡಾ. ರೋಸ್ಲಿನ್ ರಾಜಾ ಅವರು ಡಿಜಿಟಲ್ ಸಂಪರ್ಕಕ್ಕಾಗಿ ‘ಕ್ಯಾಥೋಲಿಕ್ ಕನೆಕ್ಟ್’ (Catholic Connect) ಆ್ಯಪ್ ಕುರಿತು ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.


ಅಂತಿಮವಾಗಿ ಬಿಷಪ್ ಆಂಟೋನಿಸ್ ಬಾರಾ ಧನ್ಯವಾದ ಸಮರ್ಪಿಸಿದರು. ಸಮ್ಮೇಳನದ ಆವರಣದಲ್ಲಿ ಮಹಿಳಾ ಉದ್ಯಮಿಗಳು ತಯಾರಿಸಿದ ಕರಕುಶಲ ವಸ್ತುಗಳು ಮತ್ತು ಉತ್ಪನ್ನಗಳ ವಸ್ತುಪ್ರದರ್ಶನವನ್ನು ಉದ್ಘಾಟಿಸಲಾಯಿತು. ಈ ರಾಷ್ಟ್ರೀಯ ಸಮಾವೇಶವು ಅಕ್ಟೋಬರ್ 20ರವರೆಗೆ ಮುಂದುವರಿಯಲಿದೆ.

Share News