DAKSHINA KANNADALATEST NEWSSTATE

*ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿ ಕಂಬಳದ ವೈಶಿಷ್ಟ್ಯ: ಸಿಎಂ ಡಿ ಕೆ ಶಿವಕುಮಾರ್*

ಮೈಸೂರು, ಅ.18:”ಕಂಬಳ ಶ್ರಮಿಕರ ಕ್ರೀಡೆ, ಕರಾವಳಿ ಭಾಗದ ಜನರ ಸಾಂಸ್ಕೃತಿಕ ಹಬ್ಬ. ಕೃಷಿ ಮಣ್ಣಿನಲ್ಲಿ ಹುಟ್ಟಿದ್ದು ಕಂಬಳ, ಕೃಷಿ ಸಂಸ್ಕೃತಿಯ ಮೂಲ. ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿ ಕಂಬಳದ ವೈಶಿಷ್ಟ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು.

ಮೈಸೂರು ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕಂಬಳ ಸ್ಪರ್ಧೆಗೆ ಶಿವಕುಮಾರ್ ಅವರು ಭಾನುವಾರ ಚಾಲನೆ ನೀಡಿ ಮಾತನಾಡಿದರು.

“ಇದು ಕನ್ನಡ ನಾಡಿನ ಹಬ್ಬ. ತಾಯಿ ಚಾಮುಂಡಿಯ ಹಬ್ಬಕ್ಕೆ ಕರಾವಳಿಯಿಂದ ಕಂಬಳ ಕಾರ್ಯಕ್ರಮವನ್ನು ತಂದಿದ್ದೇವೆ. 800 ವರ್ಷಗಳ ಹಿಂದೆ ರೈತರ ಬದುಕು ಕಾಪಾಡುವಂತೆ ಕದ್ರಿ ಮಂಜುನಾಥನ ಸೇವೆಗೆ, ಪ್ರಾರ್ಥನೆಗೆ ಈ ಕಂಬಳ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಯುತ್ತದೆ. ಈ ಆಚರಣೆ ಬಗ್ಗೆ ದೇಶದಾದ್ಯಂತ ಚರ್ಚೆ ಮಾಡಿ ಕಾನೂನು ತರಲಾಗಿದೆ” ಎಂದರು.

“ಭತ್ತದ ಗದ್ದೆ, ಮಳೆ, ಮಣ್ಣು, ಕೋಣ, ರೈತರ ಬದುಕನ್ನು ನಾವು ಕಂಬಳದಲ್ಲಿ ನೋಡುತ್ತಿದ್ದೇವೆ. ಕೃಷಿಯ ಶ್ರಮಿಕರಿಗೆ ಗೌರವಿಸಲು, ನಮ್ಮ ಕ್ರೀಡೆ ಹಾಗೂ ಕಲೆಗೆ ಉತ್ತೇಜನ ನೀಡಲು ನಾವು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಇದರ ಬಗ್ಗೆ ಟೀಕೆಗಳು ಬಂದವು. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ಟೀಕೆ ಮಾಡುವುದು ತಪ್ಪಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಎಲ್ಲಾ ಸಂಸ್ಕೃತಿ, ಪರಂಪರೆಯನ್ನು ಈ ದಸರಾ ಕಾರ್ಯಕ್ರಮದ ಭಾಗವಾಗಿ ಮಾಡಲು ನಾವು ಮುಂದಾಗಿದ್ದೇವೆ” ಎಂದರು.

“ಕಂಬಳ ನಡೆಸುವ ಸುಮಾರು 3 ಸಾವಿರ ಜನ ಕರಾವಳಿಯಿಂದ ಇಲ್ಲಿಗೆ ಬಂದಿದ್ದೀರಿ, ನಿಮಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ಹಿಂದೆ ವಿಜಯನಗರದ ಅರಸರು ಕೂಡ ಕರಾವಳಿ ಭಾಗದ ಕೋಣಗಳಿಗೆ ಗೌರವ ಅರ್ಪಿಸುತ್ತಿದ್ದರು. ಈ ಕುರಿತ ಇತಿಹಾಸ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.

*ಒಂದೇ ನಾಡು ಹಲವು ಸಂಸ್ಕೃತಿ, ಒಂದೇ ಕನ್ನಡತನ ಅದುವೇ ಅಖಂಡ ಕರ್ನಾಟಕ ಎಂಬ ಸಂದೇಶ ರವಾನೆ*

ತಾಯಿ ಚಾಮುಂಡಿ ಹಾಗೂ ನನ್ನ ಆರಾಧ್ಯ ದೈವ ವೀರ ಗಂಗಾಧರ ಅಜ್ಜಯ್ಯ ಅವರ ಪಾದಗಳಿಗೆ ನಮಿಸಿ, ಈ ಐತಿಹಾಸಿಕ ಸಾಂಸ್ಕೃತಿಕ ಕ್ರೀಡೆಯನ್ನು ಆನಂದಿಸಿದ್ದೇವೆ. ಕಂಬಳ ಕರಾವಳಿಯ ಸಾಂಸ್ಕೃತಿಯ ಹಬ್ಬ, ನಾಡಿನ ಕ್ರೀಡೆಯಾಗಿದೆ. ನಮ್ಮ ಸರ್ಕಾರ 23 ಕಂಬಳ ಕೂಟಕ್ಕೆ ತಲಾ 5 ಲಕ್ಷ ನೀಡುತ್ತಿದೆ. ಕರಾವಳಿಯಿಂದ ಮೈಸೂರು ಕಲ್ಯಾಣ ಕರ್ನಾಟಕವರೆಗೆ ‘ಒಂದೇ ನಾಡು ಹಲವು ಸಂಸ್ಕೃತಿ, ಒಂದೇ ಕನ್ನಡತನ ಅದುವೇ ಅಖಂಡ ಕರ್ನಾಟಕ’ ಎಂಬ ಸಂದೇಶವನ್ನು ನಾವು ನೀಡುತ್ತಿದ್ದೇವೆ” ಎಂದು ಹೇಳಿದರು.

*ದಸರಾ ಬಗ್ಗೆ ರೀಲ್ ಮಾಡಿ, 100 ಅತ್ಯುತ್ತಮ ರೀಲ್ ಮಾಡಿದವರಿಗೆ ಪ್ರಶಸ್ತಿ*

ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಈ ಕಂಬಳ ವೀಕ್ಷಣೆ ಮಾಡಿದ್ದಾರೆ. ರಾಜ್ಯದ ಜನರು ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ರೀಲ್ ಮಾಡಿ ಮೈಸೂರು ದಸರಾ ಪೇಜ್ (mysoredasara.2026) ಗೆ ಟ್ಯಾಗ್ ಮಾಡಿ. ಅತ್ಯುತ್ತಮ 100 ರೀಲ್ ಮಾಡಿದವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು. ರಾಜ್ಯದ ಯಾವ ಭಾಗದ ಜನರದರೂ ಸರಿ, ದೀಪಾಲಂಕಾರ, ಜಂಬೂಸವಾರಿ, ಕ್ರೀಡೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಯಾವುದರ ಬಗ್ಗೆ ಬೇಕಾದರೂ ರೀಲ್ ಮಾಡಬಹುದು.

ಭಾರತೀಯ ಪ್ರಾಣಿ ಮಂಡಳಿಯವರು ಈ ಕಂಬಳ ವಿಚಾರದಲ್ಲಿ ತೊಡಗಿದ್ದಾರೆ. ಈ ಕಂಬಳ ಯಾವ ರೀತಿ ಮಾಡಬೇಕು ಎಂದು ಕಾನೂನು ರಚಿಸಿ, ಮಾರ್ಗಸೂಚಿಸಿ ರಚಿಸಿದ್ದಾರೆ. ನಾವು ಸಂಸ್ಕೃತಿ, ಸಂಪ್ರದಾಯ ಗೌರವಿಸಿ ಪಾಲಿಸಬೇಕು, ಕಲೆಯನ್ನು ಪ್ರೋತ್ಸಾಹಿಸಬೇಕು, ಪರಂಪರೆಯನ್ನು ಪಾಲಿಸಬೇಕು.

ನಾವು ಹೋರಿಗಳನ್ನು ಸಾಕುತ್ತೇವೆ. ಆದರೆ ಕ್ರೀಡೆ ಮಾಡುತ್ತಿಲ್ಲ. ನಾವು ಶ್ವಾನ ಪ್ರದರ್ಶನ ಮಾಡಿಕೊಂಡು ಬರುತ್ತಿದ್ದೇವೆ. ದಸರಾದಲ್ಲಿ ವಿಂಟೆಜ್ ಕಾರು, ಗಾಯನ, ನೃತ್ಯ, ಆಹಾರ ಪ್ರದರ್ಶನ ಮಾಡಿದ್ದು, ಏರ್ ಶೋ ಮೂಲಕ ನಮ್ಮ ಸೈನಿಕರು ವೈಮಾನಿಕ ಪ್ರದರ್ಶನ ನಡೆಸಲಿದ್ದಾರೆ.

*ಕಂಬಳ ಓಟಗಾರರಿಗೆ ತರಬೇತಿ ನೀಡಿದರೆ ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ*

“ಇಂದು ಕಂಬಳದ ಓಟದಲ್ಲಿ 9 ಸೆಕೆಂಡಿಗೆ ಓಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಬೆನ್ ಜಾನ್ಸನ್ ಅವರು 9 ಸೆಕೆಂಡಿಗೆ 100 ಮೀ. ಓಡಿ ವಿಶ್ವ ದಾಖಲೆ ಬರೆದಿದ್ದರು. ಈ ಕಂಬಳದಲ್ಲಿ ಓಡುವರಿಗೆ ಸೂಕ್ತ ತರಬೇತಿ ನೀಡಿದರೆ ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡಬಹುದು ಎಂಬ ನಂಬಿಕೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ನಾಡಿನ ವಿವಿಧ ಕಲೆಗಳಿಗೆ ದಸರಾದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಮ್ಮ ನಾಡಿನ ವಿವಿಧ ಪರಂಪರೆಯನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಲಕ್ಷಾಂತರ ಜನ ಬಂದು ದಸರಾ ವೀಕ್ಷಣೆ ಮಾಡುತ್ತಿದ್ದಾರೆ. ನಿಮ್ಮ ಮೇಲೆ ತಾಯಿ ಚಾಮುಂಡೇಶ್ವರಿ ಕೃಪೆ ಇರಲಿ” ಎಂದು ತಿಳಿಸಿದರು.

Share News