• Home  
  • ನಮ್ಮ ಕುಡ್ಲ ‘ನೃತ್ಯ ಭಜನೆ ಸೀಸನ್ 4’: ಉಜಿರೆ ಶ್ರೀ ಜನಾರ್ದನ ಸ್ವಾಮಿ ಭಜನಾ ಮಂಡಳಿಗೆ ಪ್ರಥಮ ಬಹುಮಾನ
- HOME - LATEST NEWS

ನಮ್ಮ ಕುಡ್ಲ ‘ನೃತ್ಯ ಭಜನೆ ಸೀಸನ್ 4’: ಉಜಿರೆ ಶ್ರೀ ಜನಾರ್ದನ ಸ್ವಾಮಿ ಭಜನಾ ಮಂಡಳಿಗೆ ಪ್ರಥಮ ಬಹುಮಾನ

ಮಂಗಳೂರು: ನಮ್ಮ ಕುಡ್ಲ ವಾಹಿನಿಯ ವತಿಯಿಂದ ನೃತ್ಯ ಭಜನಾ ಸ್ಪರ್ಧೆಯ ಸೀಸನ್‌ -4 ಜುಲೈ 5 ರಂದು ಭಾನುವಾರ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು. ದೀಪಕ್ಕೆ ಎಣ್ಣೆ ಎರೆದು, ದೀಪ ಬೆಳಗಿಸುವ ಮೂಲಕ ಮಾಣಿಲ ಶ್ರೀ ಧಾಮದ ಮೋಹನದಾಸ ಪರಮ ಹಂಸ ಸ್ವಾಮೀಜಿ ಮತ್ತು ಒಡಿಯೂರು ಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ಹಾಗೂ ಗಣ್ಯರು ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಆಶೀರ್ವಾದ ನೀಡಿದ ಮಾಣಿಲಶ್ರೀಗಳು, ಹರಿನಾಮ ಸಂಕೀರ್ತನೆಯಿಂದ ಜಗತ್ತಿಗೆ ವಿಶ್ವಶಾಂತಿ ಕರುಣಿಸಲಿ. ಚೆನ್ನಾಗಿ ಮಳೆ […]

Share News

ಮಂಗಳೂರು: ನಮ್ಮ ಕುಡ್ಲ ವಾಹಿನಿಯ ವತಿಯಿಂದ ಆಯೋಜಿಸಲಾಗಿದ್ದ ಪ್ರಸಿದ್ಧ ‘ನೃತ್ಯ ಭಜನಾ ಸ್ಪರ್ಧೆ’ಯ ಸೀಸನ್‌-4 ಇತ್ತೀಚೆಗೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅತ್ಯಂತ ವೈಭವದಿಂದ ಜರುಗಿತು. ಇಡೀ ದಿನ ನಡೆದ ಈ ರೋಮಾಂಚನ ಕಾರಿ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಕುಣಿತ ಭಜನಾ ಮಂಡಳಿಯು ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡಿದೆ.

ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಒಡಿಯೂರು ಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡಿದ ಮಾಣಿಲ ಶ್ರೀಗಳು, “ಹರಿನಾಮ ಸಂಕೀರ್ತನೆಯು ಜಗತ್ತಿಗೆ ಶಾಂತಿಯನ್ನು ತರಲಿ. ಉತ್ತಮ ಮಳೆ-ಬೆಳೆಯಾಗಿ ರೈತರ ಸಂಕಷ್ಟಗಳು ದೂರವಾಗಲಿ. ಭಜನಾ ಕಾರ್ಯಕ್ರಮಗಳ ಮೂಲಕ ಲೋಕ ಕಲ್ಯಾಣವಾಗಲಿ” ಎಂದು ಹಾರೈಸಿದರು.

ಕುದ್ರೊಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜೈರಾಜ್‌ ಎಚ್‌. ಸೋಮಸುಂದರಂ, ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್ , ಕರುಣಾ ಇನ್‌ಫ್ರಾ ಪ್ರಾಪರ್ಟಿಸ್ ಎಂಡಿ ಕರುಣಾಕರ, ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಉಪಾಧ್ಯಕ್ಷ ಡಾ. ಬಿ ಜಿ ಸುವರ್ಣ, ಸದಸ್ಯರಾದ ಕಿಶೋರ್ ದಂಡಕೇರಿ, ಕೃತಿನ್ ಅಮೀನ್‌ ಮೊದಲಾದವರಿದ್ದರು. ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಹರೀಶ್ ಕರ್ಕೇರ, ಲೀಲಾಕ್ಷ ಕರ್ಕೇರ, ಸುರೇಶ್‌ ಕರ್ಕೇರ, ಮೋಹನ್ ಕರ್ಕೇರ ಸಹೋದರರು, ನಮ್ಮ ಕುಡ್ಲ ವಾಹಿನಿ ಸಿಬ್ಬಂದಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 19 ಪ್ರಮುಖ ತಂಡಗಳು ಈ ನೃತ್ಯ ಭಜನಾ ಮಹಾಸಮರದಲ್ಲಿ ಭಾಗವಹಿಸಿ, ತಮ್ಮ ಸಾಂಸ್ಕೃತಿಕ ಕಲಾ ಪ್ರದರ್ಶನದಿಂದ ಭಕ್ತರ ಮನಗೆದ್ದವು.

ಸ್ಪರ್ಧೆಯ ಸಂದರ್ಭ ಮಾಜಿ ಸಚಿವ, ಲ್ಯಾಂಡ್ ಲಿಂಕ್ಸ್ ಸಂಸ್ಥೆಯ ಮಾಲಕ ಕೃಷ್ಣ ಜೆ ಪಾಲೇಮಾರ್, ಉದ್ಯಮಿ ಸೂರಜ್ ಕಲ್ಯಾ ಮತ್ತು ಶಾಸಕ ವೇದವ್ಯಾಸ್ ಕಾಮತ್ ಅವರು ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಕೃಷ್ಣ ಜೆ ಪಾಲೇಮಾರ್ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸ್ಪರ್ಧೆಯ ಸಮಾರೋಪ ನಡೆಯಿತು. ಒಡಿಯೂರು ಸ್ವಾಮೀಜಿ ಆಶೀರ್ವಚನ ನೀಡಿ ಬದುಕಿದರೆ ಭಜನೆ ಮಾಡುತ್ತಾ ಬದುಕು ಎಂಭ ದಾಸರ ಮಾತಿದೆ. ಭಜನೆ ಅಂದರೆ ಸಂಸ್ಕೃತಿ. ಭಜಕರು ಭಗವಂತನನ್ನು ಸ್ಮರಿಸಿದರೆ ಸಾಕ್ಷಾತ್ಕಾರ ಲಭಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾಜಿ ಕೇಂದ್ರ ಸಚಿವ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ದಿಯ ರೂವಾರಿ ಜನಾರ್ಧನ ಪೂಜಾರಿ ಭಾಗವಹಿಸಿ ಮಾತನಾಡಿ ಸ್ಪರ್ಧೆಯ ಆಯೋಜಕರಿಗೆ ಮತ್ತು ಸ್ಪರ್ಧಾಳುಗಳನ್ನು ಅಭಿನಂದಿಸಿದರು. ಉದ್ಯಮಿ ಶಶಿ ಕ್ಯಾಟರಿಂಗ್ ಸರ್ವಿಸಸ್ ಮಾಲಕ ಶಶಿಧರ್ ಶೆಟ್ಟಿ ಬರೋಡಾ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅತಿಥಿಗಳಾಗಿದ್ದರು.

ವಿಜೇತರ ವಿವರ, ಬಹುಮಾನ ವಿತರಣೆ
ನೃತ್ಯ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಕುಣಿತ ಭಜನಾ ಮಂಡಳಿಗೆ 25 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಪೊಳಲಿ ಕಾಂಜಿಲಕೋಡಿ ಈಶ್ವರೀ ಭಜನಾ ಮಂಡಳಿ ದ್ವಿತೀಯ ಸ್ಥಾನ ಪಡೆದು 15 ಸಾವಿರ ರೂ. ನಗದು ಬಹುಮಾನ ಗೆದ್ದುಕೊಂಡಿತು. ತೃತೀಯ ಸ್ಥಾನ ಪಡೆದ ಮೂಡುಬಿದಿರೆಯ ಕೋಟೆಬಾಗಿಲು ಮಹಮ್ಮಾಯಿ ಸೇವಾ ಭಜನಾ ಮಂಡಳಿಗೆ 10 ಸಾವಿರ ರೂ. ನಗದು, ನಾಲ್ಕನೇ ಸ್ಥಾನ ಪಡೆದ ಮೂಡುಬಿದಿರೆಯ ಪುತ್ತಿಗೆ ಸಂಪಿಗೆಯ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಗೆ 5 ಸಾವಿರ ರೂ. ನಗದು, ಐದನೇ ಸ್ಥಾನ ಪಡೆದ ಮಂಜೇಶ್ವರದ ಶ್ರೀ ಛಾಯಾ ಸುತ ಭಜನಾ ತಂಡಕ್ಕೆ 5 ಸಾವಿರ ರೂ. ನಗದು ಹಾಗೂ ಶಿಸ್ತಿನ ತಂಡವಾಗಿ ಮೂಡಿ ಬಂದ ಮಂಜೇಶ್ವರದ ವಸುಂಧರಾ ಕುಣಿತ ಭಜನಾ ತಂಡ (ಜ್ಯೂನಿಯರ್) ಕ್ಕೆ 5 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಗೌರವ ಧನ ವಿತರಿಸಲಾಯಿತು.

ಉಪನ್ಯಾಸಕ ಅರುಣ್ ಉಳ್ಳಾಲ್ ಮತ್ತು ಸೌಂದರ್ಯ ಆಳ್ವ ಅವರು ನೃತ್ಯ ಭಜನಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕಾರ್ಯಕ್ರಮದಲ್ಲಿ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವೀಸಸ್ ಇಂಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಶೆಟ್ಟಿ, ಮಂಗಳೂರಿನ ಕಾರ್‌ ಸ್ಟ್ರೀಟ್ ನ ನ್ಯೂ ರವಿ ಇಂಡಸ್ರ್ಟೀಸ್ ಇದರ ಮ್ಯಾನೇಜರ್ ರಂಜಿತ್, ಪುತ್ತೂರು ನಿತ್ಯ ಫುಡ್ ಪ್ರೊಡಕ್ಟ್ಸ್ ಮಾಲಕ ರಾಧಾಕೃಷ್ಣ, ಮಂಗಳೂರಿನ ಭಾರತಿ ಬಿಲ್ಡರ್ಸ್ ಇದರ ಆಡಳಿತ ನಿರ್ದೇಶಕ ಲೋಕನಾಥ ಶೆಟ್ಟಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮ ಸುಂದರಂ, ಮಾಲತಿ ಜನಾರ್ಧನ ಪೂಜಾರಿ, ಅನಿವಾಸಿ ಉದ್ಯಮಿ, ಮೂಡಂಬೈಲು ಡಾ| ರವಿ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ದಯಾನಂದ ಕಟೀಲ್, ನಿತಿನ್ ಸಾಲಿಯಾನ್ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನೃತ್ಯ ಭಜನಾ ತಂಡದ ಮಕ್ಕಳಿಂದ ಸಾಮೂಹಿಕವಾಗಿ ಭಜನಾ ಮಂಗಳ ನಡೆಯಿತು.

Share News