LATEST NEWS

ಕುದ್ರೋಳಿ ಕ್ಷೇತ್ರದಲ್ಲಿ ಕಂಗೊಳಿಸಿದ ಗೂಡುದೀಪಗಳು: 26ನೇ ವರ್ಷದ ‘ನಮ್ಮ ಕುಡ್ಲ’ ಸ್ಪರ್ಧೆ ಯಶಸ್ವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ತುಳು ವಾರ್ತಾ ವಾಹಿನಿ ‘ನಮ್ಮ ಕುಡ್ಲ’ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ 26ನೇ ವರ್ಷದ ‘ನಮ್ಮ ಕುಡ್ಲ ಗೂಡು ದೀಪ ಸ್ಪರ್ಧೆ’ ನವೆಂಬರ್ 7ರ ಶನಿವಾರದಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆವರಣದಲ್ಲಿ ಅತ್ಯಂತ ವೈಭವದಿಂದ ನಡೆಯಿತು.

ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ಸ್ಪರ್ಧಿಗಳು ತಮ್ಮ ಮನೆಗಳಲ್ಲಿ ಸ್ವತಃ ತಯಾರಿಸಿದ ವಿಭಿನ್ನ ವಿನ್ಯಾಸದ, ವರ್ಣರಂಜಿತ ಗೂಡು ದೀಪಗಳನ್ನು ಪ್ರದರ್ಶಿಸಿದರು. ಮುಸ್ಸಂಜೆಯ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದ ಗೂಡು ದೀಪಗಳು ಕುದ್ರೋಳಿ ಕ್ಷೇತ್ರದ ಆವರಣದಲ್ಲಿ ಹೊಸತೊಂದು ಬೆಳಕಿನ ಲೋಕವನ್ನೇ ಸೃಷ್ಟಿಸಿ, ಸಾರ್ವಜನಿಕರ ಆಕರ್ಷಣೆಗೆ ಪಾತ್ರವಾದವು.

ನಮ್ಮ ಕುಡ್ಲ ಗೂಡು ದೀಪ ಸ್ಪರ್ಧೆಯ ಮಾರ್ಗದರ್ಶಕರು, ಮಾಜಿ ಕೇಂದ್ರ ಸಚಿವರು ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿಯಾದ ಬಿ. ಜನಾರ್ಧನ ಪೂಜಾರಿ ಮತ್ತು ಅವರ ಪತ್ನಿ ಮಾಲತಿ ಜೆ. ಪೂಜಾರಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಗೂಡು ದೀಪಗಳನ್ನು ಮೇಲಕ್ಕೇರಿಸುವ ಮೂಲಕ ಸ್ಪರ್ಧೆಗೆ ಅಧಿಕೃತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕೃಷ್ಣ ಪಾಲೆಮಾರ್ ಅವರು, “ಗೂಡು ದೀಪ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಕುಡ್ಲ ಸಂಸ್ಥೆಯು ನೇರ ಪ್ರಸಾರದ ಮೂಲಕ ಈ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುತ್ತಾ, ಪ್ರತಿವರ್ಷ ಸ್ಪರ್ಧೆ ನಡೆಸುತ್ತಿರುವುದು ಶ್ಲಾಘನೀಯ. ಈ ಬೆಳಕು ಎಲ್ಲರ ಬಾಳನ್ನು ಬೆಳಗಿಸಲಿ” ಎಂದು ಹಾರೈಸಿದರು.

ಧಾರ್ಮಿಕ ಚಿಂತನೆ ಮತ್ತು ಗೌರವ ಸಮರ್ಪಣೆ

ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿ ವೆಂಕಟರಮಣ ಆಸ್ರಣ್ಣ ಅವರು ಆಶೀರ್ವಚನ ನೀಡಿ, “ಗೂಡು ದೀಪದಲ್ಲಿ ಅವಳಿ ದೀಪಗಳನ್ನು ಇರಿಸುವ ಸಂಪ್ರದಾಯವಿದ್ದು, ಇದು ಭಯವನ್ನು ನಿವಾರಿಸುತ್ತದೆ ಎಂಬ ನಂಬಿಕೆಯಿದೆ. ಸ್ಪರ್ಧಿಗಳು ಹೊಸ ಹೊಸ ನಮೂನೆಯ ದೀಪಗಳನ್ನು ತಯಾರಿಸಿ ಭಾಗವಹಿಸುತ್ತಿರುವುದು ಸಂತೋಷ ತಂದಿದೆ” ಎಂದರು.

ಇದೇ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ‘ನಮ್ಮ ಕುಡ್ಲ’ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ನವೋದಯ ಸ್ವಸಹಾಯ ಸಂಘಗಳು ಇತರ ಜಿಲ್ಲೆಗಳಿಗೂ ವಿಸ್ತರಿಸಲು ನಮ್ಮ ಕುಡ್ಲ ವಾಹಿನಿಯ ಪ್ರಚಾರವೇ ಪ್ರಮುಖ ಕಾರಣ ಎಂದು ಸ್ಮರಿಸಿದರು.

ಸಮಾರಂಭದಲ್ಲಿ ಎ. ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ. ಜೆ. ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಸಂತೋಷ್ ಜನಾರ್ಧನ ಪೂಜಾರಿ, ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಮ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿ ಕಿಶೋರ್ ದಂಡಕೇರಿ ಹಾಗೂ ಡಾ. ಬಿ.ಜಿ. ಸುವರ್ಣ ಉಪಸ್ಥಿತರಿದ್ದು ಶುಭ ಹಾರೈಸಿದರು.

ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದರು. ನಮ್ಮ ಕುಡ್ಲ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಾಹಿನಿಯ ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ, ಸಂತೋಷ್ ಬಿ. ಕರ್ಕೇರ ಹಾಗೂ ಸ್ಪರ್ಧೆಯ ಸಂಯೋಜಕರಾದ ದಯಾನಂದ ಕಟೀಲ್, ಶ್ರೀಕಾಂತ್ ರಾವ್, ಸುದರ್ಶನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪಡುಬಿದ್ರೆ ಬಂಟರ ಸಂಘದ ‘ಭಜನಾಮೃತ ಆನಂದ ಭೈರವಿ’ ತಂಡದಿಂದ ಭಜನೆ ಹಾಗೂ ಖ್ಯಾತ ಗಾಯಕ ಜಗದೀಶ್ ಪುತ್ತೂರು ಮತ್ತು ತಂಡದವರಿಂದ ‘ಭಕ್ತಿ ಧಾರೆ’ ಸಂಗೀತ ಕಾರ್ಯಕ್ರಮ ನೆರವೇರಿತು.

Share News