ಮಂಗಳೂರು: ಕೊಂಕಣಿಯ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ವತಿಯಿಂದ ಆಯೋಜಿಸಲಾಗಿರುವ ಮೊತ್ತಮೊದಲ ‘ವಿಶ್ವ ಕೊಂಕಣಿ ಸಂಗೀತ ಮಹಾಮೇಳ’ವು ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಕೊಂಕಣಿ ಭಾಷೆಯ ಧೀಮಂತ ನಾಯಕ, ದಿವಂಗತ ಎರಿಕ್ ಒಝೇರಿಯೊರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿರುವ 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಸುದೀರ್ಘ ಗಾಯನ ಮ್ಯಾರಥಾನ್ ಯಶಸ್ವಿಯಾಗಿ100 ಗಂಟೆಗಳನ್ನು ಪೂರ್ಣಗೊಳಿಸಿದ.

ಮಂಗಳೂರಿನ ಐತಿಹಾಸಿಕ ಕುದ್ಮುಲ್ ರಂಗರಾವ್ ಪುರಭವನ (ಟೌನ್ ಹಾಲ್)ನಲ್ಲಿ ನಡೆಯುತ್ತಿರುವ ಈ ಮಹತ್ತರ ಗಿನ್ನೆಸ್ ವಿಶ್ವ ದಾಖಲೆಯ (Guinness World Record) ಪ್ರಯತ್ನವು ಇದೀಗ ನೂರರ ಗಡಿ ದಾಟಿ ಮುನ್ನುಗ್ಗುತ್ತಿದ್ದು, ಕೊಂಕಣಿ ಭಾಷಿಕರಲ್ಲಿ ಹೊಸ ಸಂಚಲನ ಮೂಡಿಸಿದೆ.

ಪಟಾಕಿ ಸಿಡಿಸಿ ಕೊಂಕಣಿ ಕಾರ್ಯಕರ್ತರ ಸಂಭ್ರಮಾಚರಣೆ
ನಿರಂತರ ಗಾಯನ ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ 100 ಗಂಟೆಗಳ ಐತಿಹಾಸಿಕ ಮೈಲಿಗಲ್ಲನ್ನು ತಲುಪಿತು. ಈ ಮಹತ್ತರ ಕ್ಷಣ ಒದಗಿಬರುತ್ತಿದ್ದಂತೆ ಪುರಭವನದ ಆವರಣದಲ್ಲಿ ಜಮಾಯಿಸಿದ್ದ ನೂರಾರು ಕೊಂಕಣಿ ಕಾರ್ಯಕರ್ತರು, ಕಲಾಭಿಮಾನಿಗಳು ಮತ್ತು ಮಾಂಡ್ ಸೊಭಾಣ್ ಪದಾಧಿಕಾರಿಗಳು ಪಟಾಕಿಗಳನ್ನು ಸಿಡಿಸಿ, ಜಯಘೋಷಗಳನ್ನು ಕೂಗುತ್ತಾ ಪರಸ್ಪರ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.

ಎರಿಕ್ ಒಝೇರಿಯೊ ಸ್ಮರಣಾರ್ಥ ಭವ್ಯ ಕಲಾ ನಮನ
ಕೊಂಕಣಿ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ದಿವಂಗತ ಎರಿಕ್ ಒಝೇರಿಯೊರವರ ನೆನಪಿನಲ್ಲಿ ಈ ಬೃಹತ್ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಭಾಷೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಅವರ ಕನಸಿಗೆ ಪೂರಕವಾಗಿ, ವಿಶ್ವದಾದ್ಯಂತ ಇರುವ ಕೊಂಕಣಿ ಮಾತೃಭಾಷಿಕರು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿ ಈ ಗಾಯನ ಮಾರಾಥಾನ್ ನಡೆಸುತ್ತಿದ್ದಾರೆ. ಇದು ಕೇವಲ ದಾಖಲೆಯಲ್ಲ, ಕೊಂಕಣಿ ಭಾಷೆಯ ಅಸ್ಮಿತೆಯ ಪ್ರದರ್ಶನವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ವಿಶ್ವ ದಾಖಲೆಯ ಗುರಿ ಹೀಗಿದೆ:
• ಒಟ್ಟು ಅವಧಿ: 12 ದಿನಗಳು, 12 ಗಂಟೆಗಳು ಹಾಗೂ 12 ನಿಮಿಷಗಳು ನಿರಂತರ.
• ಭಾಗವಹಿಸುವಿಕೆ: ಕರಾವಳಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ದೇಶ-ವಿದೇಶಗಳ ವಿವಿಧ ವೈವಿಧ್ಯಮಯ ಉಪಭಾಷೆಗಳ 300ಕ್ಕೂ ಅಧಿಕ ಗಾಯನ ತಂಡಗಳು ಮತ್ತು ಸಾವಿರಾರು ಗಾಯಕರು.

• ವಿಶೇಷತೆ: ಪ್ರತಿಯೊಂದು ತಂಡವೂ ಕೊಂಕಣಿ ಭಾಷೆಯ ವಿಭಿನ್ನ ಶೈಲಿ, ಸಾಂಪ್ರದಾಯಿಕ ಉಡುಪು ಹಾಗೂ ವಾದ್ಯಗಳೊಂದಿಗೆ ಕಾರ್ಯಕ್ರಮ ನೀಡುತ್ತಿದ್ದು, ಪುರಭವನಕ್ಕೆ ಭೇಟಿ ನೀಡುವ ಪ್ರೇಕ್ಷಕರಿಗೆ ಕೊಂಕಣಿ ಸಂಸ್ಕೃತಿಯ ಭವ್ಯ ದರ್ಶನವಾಗುತ್ತಿದೆ.

ಮಾಂಡ್ ಸೊಭಾಣ್ ಸಂಸ್ಥೆಯು ಈ ಹಿಂದೆ 40 ಗಂಟೆಗಳ ನಿರಂತರ ಗಾಯನದ ಮೂಲಕ ಮೊದಲ ಬಾರಿಗೆ ಗಿನ್ನೆಸ್ ದಾಖಲೆ ಬರೆದಿತ್ತು. ಇದೀಗ ತನ್ನದೇ ಹಳೆಯ ದಾಖಲೆಯನ್ನು ಮುರಿದು, ಸುಮಾರು 300 ಗಂಟೆಗಳಿಗೂ ಅಧಿಕ ಕಾಲ ನಿರಂತರವಾಗಿ ಹಾಡುವ ಮೂಲಕ ಜಗತ್ತೇ ಬೆರಗಾಗುವಂತಹ ನೂತನ ಜಾಗತಿಕ ದಾಖಲೆ ಬರೆಯಲು ಸಕಲ ಸಿದ್ಧತೆಯೊಂದಿಗೆ ಹೆಜ್ಜೆ ಇಡುತ್ತಿದೆ.

ಪ್ರಸ್ತುತ ಕಲಾ ರಸಿಕರು ಹಾಗೂ ಸಾರ್ವಜನಿಕರು ಮಂಗಳೂರು ಪುರಭವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದಾರೆ ಮತ್ತು ಗಾಯಕರನ್ನು ಪ್ರೋತ್ಸಾಹಿಸುತ್ತಿದ್ದಾರೆ.






