LATEST NEWS

ಎಂಆರ್‌ಪಿಎಲ್ ಭೀಕರ ಅಗ್ನಿಸ್ಫೋಟ ದುರಂತ: ಹಳೆಯಂಗಡಿಯ ಯುವಕ ಮನೀಶ್ ಕರ್ಕಡ ಸಾವು

ಮಂಗಳೂರು,ಹಳೆಯಂಗಡಿ: ಮಂಗಳೂರು ತಾಲೂಕಿನ ಕುತ್ಪಾಡಿ/ಕೌರೂರು ವ್ಯಾಪ್ತಿಯ ಎಂ.ಆರ್.ಪಿ.ಎಲ್. (MRPL) ಸಂಸ್ಥೆಯ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಸೆ,30 ನಡೆದ ಭೀಕರ ಸ್ಫೋಟ ಹಾಗೂ ಅಗ್ನಿ ದುರಂತದಲ್ಲಿ ಹಳೆಯಂಗಡಿಯ ಭರವಸೆಯ ಯುವಕ ಮನೀಶ್ ಕರ್ಕಡ (೨೩ ವರ್ಷ) ಅವರು ಅಕಾಲಿಕವಾಗಿ ದುರಂತ ಸಾವನ್ನಪ್ಪಿರುವುದಕ್ಕೆ ಹಳೆಯಂಗಡಿಯ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ಚರ್ಚ್ ಸಮುದಾಯವು ಆಳವಾದ ಕಂಬನಿ ಮಿಡಿದಿದೆ.

ಮೃತ ಮನೀಶ್ ಕರ್ಕಡ ಅವರು ಹಳೆಯಂಗಡಿಯ ನಿವಾಸಿಗಳಾದ ಆಲ್ಬರ್ಟ್ ಕರ್ಕಡ ಮತ್ತು ಸುನಿತಾ ಕರ್ಕಡ ದಂಪತಿಯ ಪ್ರೀತಿಯ ಸುಪುತ್ರ ಹಾಗೂ ಅನಿಶ್ ಕರ್ಕಡ ಅವರ ಸಹೋದರನಾಗಿದ್ದರು. ಇವರು ಹಳೆಯಂಗಡಿಯ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ಚರ್ಚ್‌ನ ಸಕ್ರಿಯ ಹಾಗೂ ಅತ್ಯಂತ ಪ್ರೀತಿಯ ಯುವ ಸದಸ್ಯರಾಗಿದ್ದರು. ಎಂ.ಆರ್.ಪಿ.ಎಲ್. ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಇಂದು ಮಧ್ಯಾಹ್ನ ಸಂಭವಿಸಿದ ಸ್ಫೋಟದ ಬಳಿಕ ನಾಪತ್ತೆಯಾಗಿದ್ದರು. ತದನಂತರ ಹುಡುಕಾಟ ನಡೆಸಿದಾಗ ಅವರ ಮೃತದೇಹವು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ತುಂಬು ಜೀವನದ ಆರಂಭದ ದಿನಗಳಲ್ಲೇ ಮನೀಶ್ ಅವರನ್ನು ಕಳೆದುಕೊಂಡಿರುವುದು ಅವರ ಕುಟುಂಬಕ್ಕೆ ಹಾಗೂ ಇಡೀ ಚರ್ಚ್ ಸಮುದಾಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಈ ಕುರಿತು ಪ್ರಕಟಣೆ ನೀಡಿರುವ ಹಳೆಯಂಗಡಿ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ಚರ್ಚ್‌ನ ಧರ್ಮಗುರುಗಳು ಮತ್ತು ಆಡಳಿತ ಮಂಡಳಿಯು, “ಮನೀಶ್ ಕರ್ಕಡ ಅವರ ಅಕಾಲಿಕ ನಿಧನವು ಇಡೀ ಚರ್ಚ್ ಸಮುದಾಯವನ್ನು ಆಳವಾದ ಶೋಕಸಾಗರದಲ್ಲಿ ಮುಳುಗಿಸಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಮತ್ತು ಈ ಅಪಾರ ದುಃಖ ಹಾಗೂ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಪೋಷಕರು, ಸಹೋದರ ಹಾಗೂ ಕುಟುಂಬಸ್ಥರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇವೆ” ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Share News