ಮಂಗಳೂರು: ಮಂಗಳೂರಿನ ಎಂಆರ್‌ಪಿಎಲ್ (MRPL) ಸ್ಥಾವರದಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ತೀವ್ರ ಪರಿಶೀಲನೆ ನಡೆಸಿದರು. ಅಲ್ಲದೆ, ಕಂಪನಿಯ ಉನ್ನತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಒತ್ತಾಯ ಮಾಡಿದರು.

ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಶಾಸಕರು, “ಎಂಆರ್‌ಪಿಎಲ್ ಸ್ಥಾವರದಲ್ಲಿ ನಡೆದ ಈ ಸ್ಫೋಟವು ಸುರತ್ಕಲ್ ಮಾತ್ರವಲ್ಲದೆ ಇಡೀ ಮಂಗಳೂರು ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಭೂಕಂಪನದ ಮಾದರಿಯಲ್ಲಿ ಸೃಷ್ಟಿಯಾದ ಈ ಸ್ಫೋಟವು ನಮಗೆಲ್ಲರಿಗೂ ಒಂದು ಗಂಭೀರ ಎಚ್ಚರಿಕೆಯ ಸಂದೇಶವಾಗಿದೆ” ಎಂದರು.

ತನಿಖೆ ಮತ್ತು ಗರಿಷ್ಠ ಪರಿಹಾರಕ್ಕೆ ಒತ್ತಾಯ:
ಮೊದಲ ವರದಿಯಲ್ಲಿ 9 ಕಾರ್ಮಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ ಸಂದರ್ಭದಲ್ಲಿ, ಸ್ಥಳದಲ್ಲಿ ಕರ್ತವ್ಯ ನಿರತರಾಗಿದ್ದ ನೌಕರರೊಬ್ಬರು ತಡವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಾವು ಅತ್ಯಂತ ಆಘಾತಕಾರಿ ಎಂದು ಶಾಸಕರು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಅವರು ಅಧಿಕಾರಿಗಳಿಗೆ ಪ್ರಮುಖ ಸೂಚನೆ ಹಾಗೂ ಒತ್ತಾಯಗಳನ್ನು ಮಾಡಿದರು

“ಇಂತಹ ದುರ್ಘಟನೆಗಳು ಮುಂದೆಂದೂ ಮರುಕಳಿಸಬಾರದು. ಸ್ಫೋಟಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಇದನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಸಂಸ್ಥೆಯ ಕಡೆಯಿಂದ ಗರಿಷ್ಠ ಮಟ್ಟದ ಹೆಚ್ಚಿನ ಪರಿಹಾರ ಒದಗಿಸಬೇಕು.ಗಾಯಗೊಂಡಿರುವ ಎಲ್ಲಾ ಕಾರ್ಮಿಕರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕಂಪನಿಯೇ ಭರಿಸಬೇಕು ಮತ್ತು ಅವರಿಗೂ ಸೂಕ್ತ ಪರಿಹಾರ ನೀಡಬೇಕು.ಇಂತಹ ಅಪಾಯಕಾರಿ ವಾತಾವರಣದಲ್ಲಿ ಕೆಲಸ ಮಾಡುವ ಇಡೀ ನೌಕರವೃಂದಕ್ಕೆ ಸಂಸ್ಥೆಯು ತಕ್ಷಣವೇ ಜಾರಿಗೆ ಬರುವಂತೆ ‘ಆರೋಗ್ಯ ಸುರಕ್ಷಾ ಸೌಲಭ್ಯ’ವನ್ನು ಕಲ್ಪಿಸಬೇಕು. ಕಾರ್ಮಿಕರ ರಕ್ಷಣೆ ಮತ್ತು ಮೂಲಸೌಕರ್ಯಗಳ ಕೊರತೆಯಾಗದಂತೆ ಖಾತ್ರಿಪಡಿಸಿಕೊಳ್ಳಬೇಕು.ಸ್ಫೋಟದ ತೀವ್ರತೆಯಿಂದಾಗಿ ಸುತ್ತಮುತ್ತಲಿನ ಸಾರ್ವಜನಿಕರ ಮನೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದ್ದಲ್ಲಿ, ತಕ್ಷಣವೇ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ವಿತರಿಸಬೇಕು.

ವೆನ್ಲಾಕ್ ಆಸ್ಪತ್ರೆಗೆ ಭೇಟಿ:
ಸ್ಥಳ ಪರಿಶೀಲನೆಯ ನಂತರ ಶಾಸಕರು ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದರು. ಮೃತ ನೌಕರನ ಪಾರ್ಥಿವ ಶರೀರದ ದರ್ಶನ ಪಡೆದು, ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಶಾಸಕರ ಜೊತೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
