ನವದೆಹಲಿ : ದಕ್ಷಿಣ ಭಾರತದ ಲಕ್ಷಾಂತರ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ನವದೆಹಲಿಯಲ್ಲಿ ಮಹತ್ವದ ಸಭೆಯಲ್ಲಿ ಭಾಗವಹಿಸಿ ಅಡಿಕೆ ಬೆಳೆಗಾರರ ಪರವಾಗಿ ಬಲವಾದ ಧ್ವನಿಯನ್ನು ಎತ್ತಿದರು.
ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಶಿವಮೊಗ್ಗ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ಅಡಿಕೆ ಸಹಕಾರಿ ನಿಯೋಗದಲ್ಲಿ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ಭಾಗವಹಿಸಿದರು.

ಮಹಾರಾಷ್ಟ್ರದಲ್ಲಿ ಸೂಕ್ತ ದಾಖಲೆಗಳನ್ನು ಹೊಂದಿರುವ ಅಡಿಕೆ ಸಾಗಣೆ ವಾಹನಗಳನ್ನು ತಡೆಹಿಡಿಯುತ್ತಿರುವುದರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಅಡಿಕೆ ಬೆಳೆಗಾರರು, ಸಹಕಾರಿ ಸಂಸ್ಥೆಗಳು ಹಾಗೂ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಡೆಹಿಡಿಯಲಾಗಿರುವ ಅಡಿಕೆ ಸಾಗಣೆ ವಾಹನಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಮಾನ್ಯ ದಾಖಲೆಗಳನ್ನು ಹೊಂದಿರುವ ಅಡಿಕೆ ಸಾಗಣೆ ವಾಹನಗಳ ಸುಗಮ ಸಂಚಾರಕ್ಕೆ ಪಾರದರ್ಶಕ ಮತ್ತು ಶಾಶ್ವತ ಕಾರ್ಯವಿಧಾನ ಜಾರಿಗೊಳಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
MAMCOS, CAMPCO, TUMCOS ಹಾಗೂ ಕರ್ನಾಟಕ ರಾಜ್ಯ ಅಡಿಕೆ ಮಾರುಕಟ್ಟೆ ಸಹಕಾರ ಸಂಘಗಳ ಒಕ್ಕೂಟದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.
ಅಡಿಕೆ ಬೆಳೆಗಾರರ ಹಿತಾಸಕ್ತಿಯ ರಕ್ಷಣೆ ನಮ್ಮ ಆದ್ಯತೆಯಾಗಿದ್ದು, ರೈತರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸುವಂತೆ ಮಹಾರಾಷ್ಟ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ಅರಗ ಜ್ಞಾನೇಂದ್ರ, ಶಿವಮೊಗ್ಗ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ CAMPCO, MAMCOS ಸೇರಿದಂತೆ ವಿವಿಧ ಅಡಿಕೆ ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


